ADVERTISEMENT

ಕಾನೂನು ಸುವ್ಯವಸ್ಥೆ ಕಾಪಾಡಲು ಲಾಠಿ ಪ್ರಹಾರ

ಪೊಲೀಸ್‌ ಇಲಾಖೆ ಕ್ರಮಕ್ಕೆ ಜಿಲ್ಲಾಧಿಕಾರಿ ಮಂಜುನಾಥ್‌ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 15:35 IST
Last Updated 7 ಜನವರಿ 2020, 15:35 IST

ಕೋಲಾರ: ‘ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಭಾರತೀಯ ಹಿತರಕ್ಷಣಾ ವೇದಿಕೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಾಠಿ ಪ್ರಹಾರಕ್ಕೆ ಕಾರಣರಾದವರ ವಿರುದ್ಧ ದೂರು ದಾಖಲಾಗಿದ್ದು, ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾನೂನು ಎಲ್ಲರಿಗೂ ಒಂದೇ. ಕಾನೂನು ಉಲ್ಲಂಘಿಸಿದವರು ಶಿಕ್ಷೆಗೆ ಒಳಗಾಬೇಕಾಗುತ್ತದೆ. ಜಿಲ್ಲಾ ಕೇಂದ್ರವು ಸೂಕ್ಷ್ಮ ಪ್ರದೇಶವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ’ ಎಂದು ಲಾಠಿ ಪ್ರಹಾರದ ಕ್ರಮ ಸಮರ್ಥಿಸಿದರು.

‘ಲಾಠಿ ಪ್ರಹಾರದ ವಿಚಾರವಾಗಿ ಸಂಸದರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಸಿಎಎ ಪರವಾಗಿ ಡಿ.೨೮ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಜ.೪ಕ್ಕೆ ಮುಂದೂಡಲಾಯಿತು. ಎಂ.ಜಿ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಲು ಅವಕಾಶ ನೀಡಲಾಗಿತ್ತು. ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿತ್ತು’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಸ್ವಯಂ ನಿಯಂತ್ರಣ ನಾವೇ ಮಾಡಿಕೊಳ್ಳಬೇಕು. ಯಾರೇ ಆಗಲಿ ತಮ್ಮ ಹಕ್ಕಿನ ಜತೆಗೆ ಜವಾಬ್ದಾರಿ ಅರಿಯಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಬಾರದು. ನಾವು ಯಾರ ವಿರುದ್ಧವೂ ದ್ವೇಷ ಸಾಧಿಸುವುದಿಲ್ಲ. ಅದರ ಅಗತ್ಯವೂ ನಮಗಿಲ್ಲ. ಜಿಲ್ಲಾ ಕೇಂದ್ರದಲ್ಲಿ ಈ ಹಿಂದೆ ನಡೆದಿರುವ ಘಟನೆಗಳನ್ನು ಪ್ರತಿಯೊಬ್ಬರೂ ಅವಲೋಕಿಸಬೇಕು’ ಎಂದು ಸಲಹೆ ನೀಡಿದರು.

‘ಕೆಲ ವ್ಯಕ್ತಿಗಳು ವೈಯಕ್ತಿಕ ಪ್ರತಿಷ್ಠೆಗಾಗಿ ಬ್ಯಾರಿಕೇಡ್‌ ತಳ್ಳಿ ಕ್ಲಾಕ್‌ಟವರ್ ಕಡೆಗೆ ಹೋಗಲು ಯತ್ನಿಸಿದ್ದರಿಂದ ಪೊಲೀಸರು ಮುತುವರ್ಜಿ ವಹಿಸಿ ಸಂಭವನೀಯ ಅನಾಹುತ ತಡೆಗೆ ಕ್ರಮ ಕೈಗೊಂಡಿದ್ದಾರೆ. ಕೋಲಾರದಲ್ಲಿ ಈ ಹಿಂದೆ ಲೋಕಸಭೆ ಮತ್ತು ನಗರಸಭೆ ಚುನಾವಣೆ ನಡೆಸಿದ್ದೇವೆ. ಲಕ್ಷಾಂತರ ಮತದಾರರಿದ್ದರೂ ಹೊರ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ಕರೆಸಿರಲಿಲ್ಲ. ಆದರೆ, ಸಿಎಎ ಬೆಂಬಲಿಸಿ ನಡೆದ ಬಹಿರಂಗ ಸಭೆಗೆ ಹೊರ ಜಿಲ್ಲೆಗಳ ಪೊಲೀಸರು ಬಂದಿದ್ದಾರೆಂದರೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಸಂದೇಶ ನೀಡಿದೆ

‘ಕೋಲಾರದಲ್ಲಿ ೩ ದಶಕದ ಹಿಂದೆ ಆದ ಘಟನೆಗಳೆಲ್ಲಾ ಗೊತ್ತಿದ್ದರೂ ಶಾಂತಿ ಕದಡುವ ಕೆಲಸಕ್ಕೆ ಮುಂದಾಗುವುದು ಸರಿಯಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಾನೂನು ಇಲ್ಲ. ಸರ್ಕಾರಿ ಅಧಿಕಾರಿಗಳಾದ ನಾವು ಸರ್ಕಾರದ ಮಾರ್ಗಸೂಚಿಯಂತೆ ಕೆಲಸ ಮಾಡಬೇಕಷ್ಟೇ’ ಎಂದು ತಿಳಿಸಿದರು.

‘ಬಹಿರಂಗ ಸಭೆ ಆಯೋಜಕರು ಕರ್ತವ್ಯ ನಿಭಾಯಿಸದೆ ಮೆರವಣಿಗೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು. ಕಾನೂನು ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಕಾಲಕ್ಕೆ ಸರಿಯಾದ ಕ್ರಮ ಕೈಗೊಂಡು ಮುಂದೆ ಇಂತಹ ಚಟುವಟಿಕೆ ನಡೆಸುವವರಿಗೆ ಸೂಕ್ತ ಸಂದೇಶ ನೀಡಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.