ADVERTISEMENT

ಕನ್ನಡ ಕಲಿಕೆ ಕಡ್ಡಾಯವಾಗಲಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 13:15 IST
Last Updated 7 ಜುಲೈ 2021, 13:15 IST

ಕೋಲಾರ: ‘ಜನರ ಆಡು ಭಾಷೆ ಯಾವುದೇ ಆಗಿರಲಿ, ಕನ್ನಡ ಕಲಿಕೆ ಕಡ್ಡಾಯವಾಗಬೇಕು. ಕನ್ನಡವೇ ಉಸಿರು, ಕನ್ನಡವೇ ಹಸಿರು’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಇಲ್ಲಿ ಬುಧವಾರ ವೀರ ಕನ್ನಡಿಗರ ರಕ್ಷಣಾ ವೇದಿಕೆಯ ಕಚೇರಿ ಉದ್ಘಾಟಿಸಿ ಮಾತನಾಡಿ, ‘ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುವವರಿದ್ದಾರೆ. ಜಿಲ್ಲೆಯು ತ್ರಿಭಾಷಾ ಸಂಗಮವಾಗಿದೆ. ಆದರೆ, ಭಾಷೆ ವಿಚಾರದಲ್ಲಿ ಬೇಧ ಭಾವವಿಲ್ಲ. ಎಲ್ಲಾ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕನ್ನಡ ಭಾಷೆ ಬಗ್ಗೆ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಸಾಕಷ್ಟು ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ. ಕನ್ನಡದಲ್ಲಿ ಓದಿದವರಿಗೆ ಉದ್ಯೋಗಾವಕಾಶ ಸಹ ಸಿಗುತ್ತಿದೆ. ಯುವಕ ಯುವತಿಯರಲ್ಲಿ ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಹೆಚ್ಚು ಕಾರ್ಯಕ್ರಮ ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಕನ್ನಡಿಗರಿಗೆ ತೊಂದರೆಯಾದರೆ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿ ಅವರ ಹಿತ ಕಾಯಬೇಕು. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅನ್ಯ ಭಾಷಿಕರು ಕನ್ನಡ ಕಲಿಯುವಂತೆ ಆಗಬೇಕು. ನಾಡು ನುಡಿಯ ರಕ್ಷಣೆಗೆ ಕನ್ನಡಪರ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜಾವೀದ್‌ಖಾನ್‌, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ವಿಜಿಕುಮಾರ್, ವೇದಿಕೆ ಪದಾಧಿಕಾರಿಗಳಾದ ಪದ್ಮಾ, ಶೋಭಾ, ರಾಜ್‌ಕುಮಾರ್, ವಾಸೀಂ, ಶಬ್ಬೀರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.