ADVERTISEMENT

ಚಿರತೆ ದಾಳಿ: 2 ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 6 ಮೇ 2022, 13:39 IST
Last Updated 6 ಮೇ 2022, 13:39 IST

ಕೋಲಾರ: ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕೂಟೇರಿ–ಲಕ್ಷ್ಮೀಸಾಗರ ಮಜರ ಗ್ರಾಮದ ರೈತರೊಬ್ಬರ ಕೊಟ್ಟಿಗೆಗೆ ಶುಕ್ರವಾರ ನುಗ್ಗಿದ ಚಿರತೆಗಳು 2 ಮೇಕೆಗಳನ್ನು ಕಚ್ಚಿ ಸಾಯಿಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಗ್ರಾಮದ ಹೊರವಲಯದಲ್ಲಿರುವ ರೈತ ವೆಂಕಟರಾಮಪ್ಪ ಅವರು ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕೂಡಿ ಹಾಕಿದ್ದರು. ಬೆಳಿಗ್ಗೆ ಕೊಟ್ಟಿಗೆ ನುಗ್ಗಿದ ಎರಡು ಚಿರತೆಗಳು ಮೇಕೆಗಳನ್ನು ಕಚ್ಚಿಕೊಂಡು ಎಳೆದೊಯ್ದಿವೆ.

‘ಗ್ರಾಮದ ಪಕ್ಕದ ಅರಣ್ಯ ಪ್ರದೇಶದಿಂದ ಆಗಾಗ್ಗೆ ಚಿರತೆಗಳು ಬರುತ್ತಿವೆ. ಈಗಾಗಲೇ ಚಿರತೆಗಳು ನಾಯಿ, ಕುರಿ, ಮೇಕೆಗಳನ್ನು ಕಚ್ಚಿ ಸಾಯಿಸಿವೆ. ಚಿರತೆ ಕಾಟದ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ವೆಂಕಟರಾಮಪ್ಪ ದೂರಿದರು.

ADVERTISEMENT

‘ಚಿರತೆಗಳು ಮೇಕೆಗಳನ್ನು ಸಾಯಿಸಿರುವ ಸಂಗತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಅವರು ಗ್ರಾಮಕ್ಕೆ ಬಂದಿಲ್ಲ. ಸುಮಾರು ₹ 20 ಸಾವಿರ ಬೆಲೆ ಬಾಳುವ ಮೇಕೆಗಳನ್ನು ಚಿರತೆಗಳು ಸಾಯಿಸಿದ್ದು, ಅಧಿಕಾರಿಗಳು ಪರಿಹಾರ ಕೊಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.