ADVERTISEMENT

ಹಿರಿಯರನ್ನು ರಕ್ಷಿಸುವ ಮನೋಭಾವ ಬಲಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 14:33 IST
Last Updated 1 ಅಕ್ಟೋಬರ್ 2019, 14:33 IST
ಕೋಲಾರದಲ್ಲಿ ಜಿಲ್ಲಾಡಳಿತದಿಂದ ಮಂಗಳವಾಎ ನಡೆದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿದರು.
ಕೋಲಾರದಲ್ಲಿ ಜಿಲ್ಲಾಡಳಿತದಿಂದ ಮಂಗಳವಾಎ ನಡೆದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿದರು.   

ಕೋಲಾರ: ‘ಹಿರಿಯರನ್ನು ರಕ್ಷಿಸುವ ಮನೋಭಾವ ಮಕ್ಕಳಲ್ಲಿ ಬಲಗೊಳ್ಳಬೇಕು ಹೊರತು ವೃದ್ಧಾಶ್ರಮಗಳಿಗೆ ಮಕ್ಕಳು ಕಳುಹಿಸಬಾರದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ನಗರದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಮಕ್ಕಳು ಹಿರಿಯರನ್ನು ಮನಸ್ಪೂರ್ಥಿಯಾಗಿ ಸಾಕಿದಾಗ ಮಾತ್ರ ನಿಮ್ಮ ಜೀವನಕ್ಕೆ ಅರ್ಥ ಸಿಗುತ್ತದೆ’ ಎಂದರು.

‘ಮಾರ್ಗದರ್ಶಕರ ಸ್ಥಾನದಲ್ಲಿರುವ ಹಿರಿಯನ್ನು ಕಡೆಗಣಿಸಲಾಗಿದೆ. ನಮ್ಮನ್ನು ಬೆಳೆಸಿ ಶಿಕ್ಷಣ ನೀಡಿ ಉತ್ತಮ ಜೀವನ ರೂಪಿಸಿದ ಪೋಷಕರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಹಿರಿಯರನ್ನು ಎಂದಿಗೂ ನಿರ್ಲಕ್ಷಿಸಬಾರದು. ಅವರೊಂದಿಗೆ ನಾವಿದ್ದೇವೆ, ನೀವು ಏಕಾಂಗಿಯಲ್ಲ, ನಿಮ್ಮ ಹಿತರಕ್ಷಣೆ ನಮ್ಮ ಜವಾಬ್ದಾರಿ ಎಂಬ ಸಂದೇಶ ರವಾನೆಯಾಗಬೇಕು. ಆಗ ಪೋಷಕರಲ್ಲಿ ಬದುಕಿನ ಬಗ್ಗೆ ಆಶಾವಾದ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಎಂ.ಜಿ.ಪಾಲಿ ಮಾತನಾಡಿ, ‘ಹಿರಿಯರನ್ನು ಎಲ್ಲರು ಗೌರವದಿಂದ ಕಾಣಬೇಕು. ಅವರು ಹೇಳಿದ ಹಿತನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು’ ಎಂದು ಸಲಹೆ ನೀಡಿದರು.

‘ಹಿರಿಯರು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಗುರುತಿನ ಚೀಟಿ ಪಡೆದುಕೊಂಡು ಸರ್ಕಾರದಿಂದ ದೊರೆಯುವ ಸೌಕರ್ಯ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಆಶೋಕ್, ಶಿಶು ಅಭಿವೃದ್ದಿ ಅಧಿಕಾರಿಯಾದ ಜಯದೇವಿ, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ವೆಂಕಟರಾಮ್, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ದ್ಯಾವರಪ್ಪ, ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷ ಧನರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.