ಕೋಲಾರ: ‘ಸಮಾಜದಲ್ಲಿ ಅಗುತ್ತಿರುವ ಬದಲಾವಣೆಗೆ ತಕ್ಕಂತೆಗುಣಾತ್ಮಕ ಶಿಕ್ಷಣ ಜಾರಿಯಾಗಬೇಕಾಗಿದೆ’ ಎಂದು ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ತಿಳಿಸಿದರು.
18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ನಡೆದ ‘ಸಿ.ಎಂ.ಗೋವಿಂದರೆಡ್ಡಿ ಬಹುಮುಖದ ಬದುಕು’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಸಾಹಿತಿ ಮತ್ತು ಮನುಷ್ಯನ ಬದುಕು ಬೇರೆ ಬೇರೆಯಾಗಿ ಕಾಣುವಂತಾಗಿದ್ದು, ಈ ಎರಡರ ದೃಷ್ಟಿಕೋನ ಸಮರ್ಪಕವಾಗಿಲ್ಲದ ಕಾರಣ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದು ವಿಷಾದಿಸಿದರು.
‘ಸಾಹಿತಿಯಾಗುವವರಿಗೆ ಶಿಕ್ಷಣ, ಆರೋಗ್ಯ ಹಾಗೂ ಆಹಾರದ ಭದ್ರತೆ ಬೇಕಾಗಿದೆ. ಸಮಾನತೆಯ ರಾಷ್ಟ್ರೀಕರಣವನ್ನು ಜಾರಿ ಮಾಡಿದಾಗ ಪ್ರಜಾಪ್ರಭುತ್ವಕ್ಕೆ ಪರಿಪೂರ್ಣ ಅರ್ಥ ಕಲ್ಪಿಸಲು ಸಾಧ್ಯ’ ಎಂದು ತಿಳಿಸಿದರು.
‘ಬರಹ ಸಾಹಿತ್ಯದ ಕೃತಿಗಳಲ್ಲಿ ಆತ್ಮಚಾರಿತಾತ್ಮಕ ವಿಷಯಗಳು ಕಂಡುಬರುವುದು ಸಾಧ್ಯ. ಪ್ರಕೃತಿಯೂ ಸೃಷ್ಟಿಸಿರುವುದನ್ನು ಮರುಕಳುಹಿಸುವ ವಿಧಾನದಂತೆ ಗೋವಿಂದರೆಡ್ಡಿ ತಮ್ಮ ಕೃತಿಗಳಲ್ಲಿ ಪ್ರದರ್ಶಸಿದ್ದಾರೆ. ಅನುಕರಣೀಯ ಪ್ರತಿಭೆಯನ್ನು ಅನಾವರಣ ಮಾಡಿರುವುದನ್ನು ಕಾಣಬಹುದು’ ಎಂದು ವಿವರಿಸಿದರು.
‘ಗೋವಿಂದರೆಡ್ಡಿಯೂ ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಬೇಕಾದಂತಹ ವಿಜ್ಞಾನ ಸಾಹಿತ್ಯವನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ್ದು, ಸರ್ಕಾರ ಜಾರಿಗೆ ತಂದಿರುವ ಕಲಿ ನಲಿ ಯೋಜನೆಯಿಂದ ರೂಪುಗೊಂಡಿರುವ ಕವಿಯಾಗಿದ್ದಾರೆ. ಇವರನ್ನು ಸರ್ಕಾರದ ಕವಿ ಎಂದು ಕರೆಯಬಹುದು’ ಎಂದು ಬಣ್ಣಿಸಿದರು.
ಸಾಹಿತಿ ಟಿ.ಯಲ್ಲಪ್ಪ ಸಮ್ಮೇಳನಾಧ್ಯಕ್ಷ ಗದ್ಯಲೋಕ ವಿಷಯ ಮಂಡಿಸಿ ಮಾತನಾಡಿ, ‘ವಾಸ್ತವ ಜಗತ್ತಿನಲ್ಲಿ ಮಕ್ಕಳು ಪೋಷಕರ ಒತ್ತಡದ ಬದುಕಿನಲ್ಲಿ ತೃಪ್ತಿಯಿಲ್ಲದೆ, ತಮ್ಮದೆ ಅದ ಸ್ವಾತಂತ್ರ್ಯದ ಇಚ್ಚಾಲೋಕದಲ್ಲಿ ಆನಂದಪಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ಮಕ್ಕಳ ಅವಶ್ಯಕತೆಗಳನ್ನು ಕಾಲಕಾಲಕ್ಕೆ ಪೂರೈಕೆ ಮಾಡದಿದ್ದರೆ ದಾರಿ ತಪ್ಪಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಗೋವಿಂದ ರೆಡ್ಡಿಯವರು ರಚಿಸಿರುವ ಮಕ್ಕಳ ಪುಸ್ತಕಗಳಲ್ಲಿ ಪೋಷಕರಿಗೆ ಎಚ್ಚರಿಸಿದ್ದಾರೆ’ ಎಂದು ಹೇಳಿದರು.
ಸಾಹಿತಿ ಸರ್ವೇಶ ಬಂಟಹಳ್ಳಿ ಮಾತನಾಡಿ, ‘ಪ್ರತಿಯೊಬ್ಬರಲ್ಲೂ ಗ್ರಾಮೀಣ ಪ್ರತಿಭೆ ಅಡಗಿರುತ್ತದೆ. ಗೋವಿಂದರೆಡ್ಡಿಯವರು ರಚಿಸಿರುವ ಶೇ.90ರಷ್ಟು ಕೃತಿಗಳು ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟಿವೆ.ಗ್ರಹಣಗಳ ಬಗ್ಗೆ ಮೂಡನಂಬಿಕೆಗಳ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಇಟ್ಟಿಕೊಂಡಿದ್ದಾರೆ. ಮಕ್ಕಳನ್ನು ತಿದಿದ್ದರೆ ಸಮಾಜ ಸರಿಹೋಗುತ್ತದೆ ಎಂಬ ಸಾಹಿತ್ಯ ರಚನೆಗೆ ಒತ್ತು ನೀಡಿದ್ದಾರೆಎಂದು ವಿವರಿಸಿದರು.
ಸಾಹಿತಿ ಪ್ರೊ.ಕೃಷ್ಣ ಮೂರ್ತಿ ಬಿಳಿಗೆರೆ ಸಮ್ಮೇಳನಾಧ್ಯಕ್ಷರ ರಂಗ ಲೋಕ ಕುರಿತು ವಿಷಯ ಮಂಡಿಸಿದರು.
ಸಮ್ಮೇಳನಾಧ್ಯಕ್ಷ ಸಿ.ಎಂ.ಗೋವಿಂದರೆಡ್ಡಿ, ಸಹ ಪ್ರಾಧ್ಯಾಪಕರಾದ ಆರ್.ಅನಂತಮೂರ್ತಿ, ಮೀನಾಕುಮಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.