ADVERTISEMENT

ವೃದ್ಧಾಶ್ರಮ ಸ್ಫೂರ್ತಿ ತಾಣವಾಗಲಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 9:45 IST
Last Updated 16 ಜನವರಿ 2020, 9:45 IST
ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಸದಸ್ಯರಿಗೆ ಅಗತ್ಯ ಸಲಕರಣೆ ವಿತರಿಸಲಾಯಿತು.
ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಸದಸ್ಯರಿಗೆ ಅಗತ್ಯ ಸಲಕರಣೆ ವಿತರಿಸಲಾಯಿತು.   

ಕೋಲಾರ: ‘ವೃದ್ಧಾಶ್ರಮಗಳು ನೆಮ್ಮದಿ ಹಾಗೂ ಸ್ಫೂರ್ತಿದಾಯಕ ಆಶ್ರಯ ತಾಣಗಳಾಗಬೇಕು’ ಎಂದು ರೋಟರಿ ಸಂಸ್ಥೆಯ ನಿಯೋಜಿತ ರಾಜ್ಯಪಾಲ ಫಜಲ್ ಮಹಮ್ಮದ್‌ ಅಭಿಪ್ರಾಯಪಟ್ಟರು.

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿಯಲ್ಲಿ ಇತ್ತೀಚೆಗೆ ನಡೆದ ರೋಟರಿ ಸಂಸ್ಥೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜಾಗತಿಕ ಪರಿಸ್ಥಿತಿ ಮತ್ತು ಬಿಡುವಿಲ್ಲದ ಜೀವನ ಶೈಲಿಯಲ್ಲಿ ವಯೋವೃದ್ಧ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ಎದುರಾಗಿದೆ’ ಎಂದು ವಿಷಾದಿಸಿದರು.

‘ತಂದೆ ತಾಯಿಯು ಕಷ್ಟಪಟ್ಟು ಮಕ್ಕಳನ್ನು ಸಾಕಿ ಶಿಕ್ಷಣ ಕೊಡಿಸಿ ಬೆಳೆಸಿರುತ್ತಾರೆ. ಆದರೆ, ಅದೇ ಮಕ್ಕಳು ಪೋಷಕರನ್ನು ಮನೆಯಿಂದ ಹೊರ ಕಳುಹಿಸಿ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಇದರಿಂದ ಹಿರಿಯ ಜೀವಗಳ ಮನಸ್ಸಿಗೆ ಆಗುವ ನೋವಿನ ಪರಿವು ಮಕ್ಕಳಿಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹಿರಿಯ ನಾಗರಿಕರು ಯೌವ್ವನದಲ್ಲಿ ದುಡಿದು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಮಾರ್ಗದರ್ಶಕರಾಗಿದ್ದಾರೆ. ಆದರೆ, ಯುವಕ ಯುವತಿಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಹಿರಿಯರನ್ನು ಮರೆಯುತ್ತಿದ್ದಾರೆ’ ಎಂದು ರೋಟರಿ ಸಂಸ್ಥೆ ಉಪ ರಾಜ್ಯಪಾಲ ಕೆ.ಬಿ.ದೇವರಾಜ್ ಕಳವಳ ವ್ಯಕ್ತಪಡಿಸಿದರು.

‘ಈ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದರೆ, ಈಗ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಮನಸ್ಥಿತಿ ಇಲ್ಲವಾಗಿದೆ. ಮಕ್ಕಳಿಗೆ ತಂದೆ ತಾಯಿ ಸಂಪಾದಿಸಿದ ಆಸ್ತಿ ಹಾಗೂ ಹಣ ಬೇಕು. ಆದರೆ, ವಯೋವೃದ್ಧ ಪೋಷಕರನ್ನು ಕೊನೆವರೆಗೂ ಪೋಷಿಸಲು ಹಿಂದೇಟು ಹಾಕುತ್ತಾರೆ’ ಎಂದು ಹೇಳಿದರು.

₹ 15 ಸಾವಿರ ಆರ್ಥಿಕ ನೆರವಿನ ಜತೆಗೆ ವೃದ್ಧಾಶ್ರಮಕ್ಕೆ ಅಗತ್ಯ ಪರಿಕರ ವಿತರಿಸಲಾಯಿತು. ರೋಟರಿ ಅಧ್ಯಕ್ಷ ವೆಂಕಟರವಣಪ್ಪ, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ವೃದ್ಧಾಶ್ರಮದ ಮುಖ್ಯಸ್ಥೆ ಸುಲೋಚನಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಅಶೋಕ್, ರೋಟರಿ ಸಂಸ್ಥೆ ವಲಯ ರಾಜ್ಯಪಾಲ ಟಿ.ಎಸ್.ರಾಮಚಂದ್ರೇಗೌಡ, ಕಾರ್ಯದರ್ಶಿ ಕೆ.ಆರ್.ಸೋಮಶೇಖರ್, ಕೋಲಾರ ಸೆಂಟ್ರಲ್ ರೋಟರಿ ಅಧ್ಯಕ್ಷ ವಿಶ್ವನಾಥಗೌಡ, ಕಾರ್ಯದರ್ಶಿ ಸುಧಾಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.