ADVERTISEMENT

ಪೊಲೀಸರು ಜನರೊಂದಿಗೆ ಬೆರೆತು ಕೆಲಸ ಮಾಡಲಿ: ಕೆ.ಎಂ.ಶಾಂತರಾಜು

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 13:33 IST
Last Updated 12 ಜುಲೈ 2024, 13:33 IST
ಕೆಜಿಎಫ್‌ ಜಿಲ್ಲಾ ಪೊಲೀಸ್‌ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು
ಕೆಜಿಎಫ್‌ ಜಿಲ್ಲಾ ಪೊಲೀಸ್‌ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು   

ಕೆಜಿಎಫ್‌: ಪ್ರತಿದಿನ ತಮ್ಮ ವ್ಯಾಪ್ತಿಯಲ್ಲಿ ಜನರ ಜತೆ ಬೆರೆತು ಪೊಲೀಸ್ ಸಿಬ್ಬಂದಿ ಸಣ್ಣ ಮಟ್ಟದಲ್ಲಿ ಕೆಲಸ ಮಾಡಿದರೂ ಕೂಡ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ. ಜನ ಬಯಸುವ ರೀತಿಯಲ್ಲಿ ಕೆಲಸ ಮಾಡಿದರೆ ಪೊಲೀಸ್ ಇಲಾಖೆಗೆ ಮೆಚ್ಚುಗೆ ಸಿಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದರು.

ಚಾಂಪಿಯನ್‌ ರೀಫ್ಸ್‌ನ ಡಿಎಆರ್ ಮೈದಾನದಲ್ಲಿ ಶುಕ್ರವಾರ ನಡೆದ ಪರೇಡ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಜೀವ ಮತ್ತು ಆಸ್ತಿ ಕಾಪಾಡುವುದು ಪೊಲೀಸರ ಕರ್ತವ್ಯ. ಮಾನವೀಯತೆಯಿಂದ ಉತ್ತಮ ಕೆಲಸ ಮಾಡಬೇಕು. ಇಂತಹ ಕೆಲಸ ಇತರರಿಗೂ ಮಾದರಿಯಾಗಬೇಕು ಎಂದರು.

ಆಂಡರಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲು ಶ್ರಮಿಸಿದ ಸಬ್‌ ಇನ್‌ಸ್ಪೆಕ್ಟರ್ ಬಿ.ಮಂಜುನಾಥ್‌, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ರಮೇಶ್‌, ಸಿಬ್ಬಂದಿಗಳಾದ ವೆಂಕಟೇಶ್‌, ಮಂಜಪ್ಪ, ಸುನೀಲ್‌ಕುಮಾರ್‌, ಲೋಕೇಶ್‌, ನಂದಿತಾ ಅವರಿಗೆ ಗೌರವ ಮತ್ತು ಪ್ರಶಂಸಾ ಪತ್ರ ನೀಡಲಾಯಿತು.

ADVERTISEMENT

ಅದೇ ರೀತಿ ₹26.40 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲು ನೆರವಾದ ಮಂಜಪ್ಪ, ವೆಂಕಟೇಶ್‌, ಆರ್‌.ರಾಜೇಂದ್ರ, ಕೆ.ಪಿ.ಶಶಿಕುಮಾರ್‌, ಲೋಕೇಶ್ ಅವರಿಗೆ ಕೂಡ ಅಭಿನಂದಿಸಲಾಯಿತು.

ಬಂಗಾರಪೇಟೆ ಕೋಲಾರ ರಸ್ತೆ ಪಕ್ಕದಲ್ಲಿ ವೃದ್ಧರೊಬ್ಬರು ಗಾಯಗೊಂಡು ಬಿದ್ದಿದ್ದ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಕೆ.ಎನ್‌.ಶ್ರೀನಿವಾಸ್ ಮತ್ತು ಅಸ್ಲಂಪಾಷ ಅವರಿಗೂ ಕೂಡ ಗೌರವ ಮತ್ತು ಪ್ರಶಂಸಾ ಪತ್ರ ನೀಡಲಾಯಿತು.

ಡಿವೈಎಸ್‌ಪಿ ಕೆ.ಪಾಂಡುರಂಗ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಮಾರ್ಕೊಂಡಯ್ಯ, ಲಕ್ಷ್ಮಿನಾರಾಯಣ, ನಾರಾಯಣಸ್ವಾಮಿ, ರಂಗಸ್ವಾಮಿ, ನವೀನ್‌ಕುಮಾರ್, ಆರ್‌ಪಿಐ ಸೋಮಶೇಖರ್‌, ಎಲ್ಲಾ ಠಾಣೆಗಳ ಸಬ್‌ ಇನ್‌ಸ್ಪೆಕ್ಟರ್‌ಗಳು ಇದ್ದರು.

ಚೆಡ್ಡಿ ಗ್ಯಾಂಗ್ ತಂಡ

ರಾಬರ್ಟಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸ್ವರ್ಣನಗರದಲ್ಲಿ ಈಚೆಗೆ ದುಷ್ಕರ್ಮಿಗಳ ತಂಡವೊಂದು ಮನೆ ಕಿಟಕಿ ಕತ್ತರಿಸಿ ಕಳ್ಳತನ ಮಾಡಲು ಪ್ರಯತ್ನ ಮಾಡಿತ್ತು. ಮಂಗಳೂರು ಪೊಲೀಸರು ಕಳ್ಳರ ತಂಡವನ್ನು ಹಿಡಿದಿದ್ದಾರೆ. ಅವರು ಮಾಡಿದ ಕೃತ್ಯಕ್ಕೂ ಇಲ್ಲಿ ನಡೆದ ಕೃತ್ಯಕ್ಕೂ ಹೋಲಿಕೆ ಇರುವುದರಿಂದ ಹೆಚ್ಚಿನ ತನಿಖೆ ನಡೆಸಲು ರಾಬರ್ಟಸನ್‌ಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್ ನವೀನ್‌ ರೆಡ್ಡಿ ಮತ್ತು ತಂಡದವರನ್ನು ಗುರುವಾರ ಮಂಗಳೂರಿಗೆ ಕಳಿಸಲಾಗಿದೆ. ತನಿಖೆ ನಂತರ ನಿಖರವಾದ ಮಾಹಿತಿ ದೊರೆಯಲಿದೆ ಎಂದು ಎಸ್‌ಪಿ ಶಾಂತರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.