ADVERTISEMENT

ಶಿಕ್ಷಕರ ಬೋಧನಾ ವಿಧಾನ ಬದಲಾಗಲಿ: ರತ್ನಯ್ಯ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 12:42 IST
Last Updated 6 ಡಿಸೆಂಬರ್ 2019, 12:42 IST
ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೋಧನಾ ವಿಸ್ತಾರ ಕಾರ್ಯಾಗಾರವನ್ನು ಡಿಡಿಪಿಐ ಕೆ.ರತ್ನಯ್ಯ ಉದ್ಘಾಟಿಸಿದರು.
ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೋಧನಾ ವಿಸ್ತಾರ ಕಾರ್ಯಾಗಾರವನ್ನು ಡಿಡಿಪಿಐ ಕೆ.ರತ್ನಯ್ಯ ಉದ್ಘಾಟಿಸಿದರು.   

ಕೋಲಾರ: ‘ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ತಕ್ಕಂತೆ ಶಿಕ್ಷಕರ ಬೋಧನಾ ವಿಧಾನದಲ್ಲೂ ಬದಲಾವಣೆ ಅಗತ್ಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಜಿಲ್ಲೆಯ ಪ್ರೌಢ ಶಾಲಾ ಗಣಿತ ಶಿಕ್ಷಕರಿಗೆ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೋಧನಾ ವಿಸ್ತಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಜೀವನದ ಪ್ರತಿ ಹೆಜ್ಜೆಯಲ್ಲೂ ಅಗತ್ಯವಾದ ಗಣಿತ ಕಷ್ಟವಲ್ಲ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಕಲಿಕೆಯಲ್ಲಿ ಗಣಿತ ಶಾಸ್ತ್ರದ ಅಳವಡಿಕೆ ಕುರಿತಂತೆ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಇದರ ಪ್ರಯೋಜನ ಪಡೆಯಬೇಕು. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಅಂಕ ಗಳಿಕೆಗೆ ಸೀಮಿತಗೊಳಿಸಿ ಕಲಿಕೆಗೆ ಪ್ರೇರಣೆ ನೀಡದಿರುವುದು ಸರಿಯಲ್ಲ. ಮಕ್ಕಳ ಅಸಕ್ತಿಗೆ ತಕ್ಕಂತೆ ಅವರ ಮನಸ್ಥಿತಿ ಅರಿತು ಶಿಕ್ಷಕರು ಬೋಧನಾ ವಿಧಾನ ಬದಲಿಸಿಕೊಳ್ಳಬೇಕು. ಗುಣಾತ್ಮಕ ಫಲಿತಾಂಶಕ್ಕೆ ಆದ್ಯತೆ ನೀಡಬೇಕು. ಅಂಕ ಗಳಿಕೆಗಿಂತ ಜ್ಞಾನಾಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು’ ಎಂದು ತಿಳಿಸಿದರು.

‘ಬೋಧನೆ ವಿಧಾನ ಮಕ್ಕಳ ಮನ ಮುಟ್ಟುವಂತೆ ಇರಲಿ. ಪಠ್ಯಕ್ರಮ ಮುಗಿಸಿದರೆ ಸಾಲದು. ಮಕ್ಕಳಲ್ಲಿನ ಕೊರತೆ ಅರಿತು ಪೂರ್ವ ಸಿದ್ಧತೆಯೊಂದಿಗೆ ತರಗತಿಗೆ ತೆರಳಿ ಪಾಠ ಮಾಡಬೇಕು. ಮಕ್ಕಳಲ್ಲಿ ಆಲೋಚನಾ ಶಕ್ತಿ ಬೆಳೆಸಿ. ವೈದ್ಯರು ಚಿಕಿತ್ಸೆಗೆ ಮುನ್ನ ರೋಗ ಪತ್ತೆ ಮಾಡುವಂತೆ ಮಕ್ಕಳ ಕಲಿಕೆ ಮಟ್ಟ ಅರಿತು ಬೋಧನೆ ಮಾಡಿ’ ಎಂದರು.

ಸಾಕ್ಷರತೆ ಗುರಿ: ‘ಸಂಸ್ಥೆಯು ಈವರೆಗೆ ಪೋಲಿಯೊ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿ ಯಶಸ್ವಿಯಾಗಿದೆ. 2025ರೊಳಗೆ ದೇಶವನ್ನು ಶೇ 100ರಷ್ಟು ಸಾಕ್ಷರತಾ ದೇಶವಾಗಿ ಮಾಡುವುದು ಸಂಸ್ಥೆಯ ಮುಂದಿನ ಗುರಿ’ ಎಂದು ರೋಟರಿ ಟೀಚ್ ಸಮಿತಿ ಅಧ್ಯಕ್ಷೆ ಲಕ್ಷ್ಮೀಶಾಸ್ತ್ರಿ ತಿಳಿಸಿದರು.

‘ಸರ್ಕಾರಿ ಶಾಲಾ ಶಿಕ್ಷಕರಿಗೆ ಬದ್ಧತೆಯಿದೆ. ಶಿಕ್ಷಕರು ರಾಷ್ಟ್ರ ನಿರ್ಮಾಪಕರು. ಸಂಪೂರ್ಣ ಸಾಕ್ಷರತೆ ಗುರಿ ಸಾಧನೆ ಭಾಗವಾಗಿ ಮೊದಲಿಗೆ ಶಿಕ್ಷಕರಿಗೆ ಅಗತ್ಯ ತರಬೇತಿ ಆಯೋಜಿಸಲಾಗುತ್ತಿದೆ. ನಿಧಾನ ಗತಿ ಕಲಿಕೆ ಮಕ್ಕಳನ್ನು ಗುರುತಿಸಿ, ಅವರಿಗೆ ಹೇಗೆ ಬೋಧನೆ ಮಾಡಬೇಕೆಂಬ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲಾಗುವುದು’ ಎಂದು ವಿವರಿಸಿದರು.

ಸನ್ಮಾನ: ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕರಾದ ಎಚ್.ಸಿ.ಮಂಜುನಾಥ್. ಎಲ್.ಸೀನಪ್ಪ, ನಿವೃತ್ತ ವಿಷಯ ಪರಿವೀಕ್ಷ ರಾಜಣ್ಣ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯಿತ್ರಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಬೆಂಗಳೂರು ರೋಟರಿ ಸ್ಪಂದನಾ ಅಧ್ಯಕ್ಷ ರವಿಚಂದ್ರನ್, ರೋಟರಿ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟರಮಣಪ್ಪ, ಕಾರ್ಯದರ್ಶಿ ಕೆ.ಆರ್.ಸೋಮಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.