ADVERTISEMENT

ಮದ್ಯದಂಗಡಿ ಕಸ: ಪರವಾನಗಿ ರದ್ದುಪಡಿಸಿ

ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 15:04 IST
Last Updated 10 ಅಕ್ಟೋಬರ್ 2019, 15:04 IST
ಕೋಲಾರ ನಗರಸಭೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳ ಸಭೆ ನಡೆಸಿದರು.
ಕೋಲಾರ ನಗರಸಭೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳ ಸಭೆ ನಡೆಸಿದರು.   

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿನ ಬಾರ್, ರೆಸ್ಟೋರೆಂಟ್‌ ಸೇರಿದಂತೆ ಮದ್ಯದಂಗಡಿಗಳ ಮಾಲೀಕರು ಅಂಗಡಿ ಕಸವನ್ನು ರಸ್ತೆ ಬದಿಯಲ್ಲಿ ವಿಲೇವಾರಿ ಮಾಡುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸದಿದ್ದರೆ ಮುಲಾಜಿಲ್ಲದೆ ಪರವಾನಗಿ ರದ್ದುಪಡಿಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಬಕಾರಿ ಇಲಾಖೆ ಉಪ ಆಯುಕ್ತೆ ಕೆ.ಕೆ.ಸುಮಿತಾ ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಯು ಇಲ್ಲಿನ ನಗರಸಭೆ ಕಚೇರಿಗೆ ಗುರುವಾರ ಭೇಟಿ ನೀಡಿದ ವೇಳೆ ನಗರಸಭೆ (ಪ್ರಭಾರ) ಆಯುಕ್ತ ಶಿವಪ್ರಕಾಶ್ ಮದ್ಯದಂಗಡಿಗಳ ಕಸ ವಿಲೇವಾರಿ ಸಮಸ್ಯೆಯನ್ನು ಗಮನಕ್ಕೆ ತಂದರು,

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಕರೆ ಮಾಡಿ, ‘ಮದ್ಯದಂಗಡಿ ಮಾಲೀಕರು ನಗರದಲ್ಲಿ ಮನಸೋಇಚ್ಛೆ ಕಸ ವಿಲೇವಾರಿ ಮಾಡುತ್ತಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಅವರು ಅಂಗಡಿಯಲ್ಲೇ ಕಸ ಶೇಖರಿಸಿಟ್ಟುಕೊಂಡು ನಗರಸಭೆಯ ಪೌರ ಕಾರ್ಮಿಕರಿಗೆ ನೀಡಿದರೆ ಒಳ್ಳೆಯದು. ಇಲ್ಲವಾದರೆ ಪರಿಸರ ಇಲಾಖೆ ಕಾನೂನು ಅನ್ವಯ ವಾಣಿಜ್ಯ ಪರವಾನಗಿ ರದ್ದುಪಡಿಸಿ. ಈ ಬಗ್ಗೆ ಮದ್ಯದಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ’ ಎಂದು ಆದೇಶಿಸಿದರು.

ADVERTISEMENT

‘ನಗರದಲ್ಲಿ ಕಸ ವಿಲೇವಾರಿಗೆ ಜಾಗ ಗುರುತಿಸಿದ್ದು, ಸುತ್ತಲೂ ಕಾಂಪೌಂಡ್ ನಿರ್ಮಿಸಲು ಟೆಂಡರ್ ನೀಡಲಾಗಿದೆ. ಕಸ ವಿಲೇವಾರಿ ವಾಹನಗಳ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಕಸ ಸಂಗ್ರಹಣೆಗೆ ಸಾರ್ವಜನಿಕರು ಪೌರ ಕಾರ್ಮಿಕರಿಗೆ ಸಹಕಾರ ನೀಡಬೇಕು. ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ ಕೈಗೊಂಡು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ’ ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಅಭಿವೃದ್ಧಿ: ‘ನಗರೋತ್ಥಾನ ಯೋಜನೆಯಡಿ ನಗರಸಭೆ ವ್ಯಾಪ್ತಿಯ 78 ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರವು ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿದೆ. ಹಣ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ವಿವರಿಸಿದರು.

‘ಕೆಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಿದ್ದು, ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು. ಕೊಳವೆ ಬಾವಿಗಳ ಪಂಪ್‌ ಮೋಟರ್‌ ದುರಸ್ತಿಗೆ ಕ್ರಮ ಕೈಗೊಳ್ಳಿ. ಒಳಚರಂಡಿ ಕಾಮಗಾರಿ ಬಹುತೇಕ ಮುಗಿದಿದೆ. ಬೇರೆ ಬೇರೆ ಗುತ್ತಿಗೆದಾರರು ಯುಜಿಡಿ ಕಾಮಗಾರಿಯನ್ನು ತುಂಡು ಗುತ್ತಿಗೆ ಪಡೆದಿರುವುದರಿಂದ ಎರಡೆರಡು ಬಾರಿ ರಸ್ತೆ ಅಗೆಯಲಾಗಿದೆ. ರಸ್ತೆಗಳಿಗೆ ಅಡ್ಡವಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರಸ್ತೆ ಬದಿಯಲ್ಲಿ ಹಾಕುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸ್ವಚ್ಛತೆಗೆ ಆದ್ಯತೆ: ‘ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಆಂದೋಲನದ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಗೆ ಅ.15ರವರೆಗೆ ಅವಕಾಶವಿದ್ದು, ಅರ್ಹ ಮತದಾರರ ಹೆಸರು ಪರಿಶೀಲಿಸಬೇಕು. ಹೆಸರು ಸೇರ್ಪಡೆ ಮತ್ತು ರದ್ದು, ಪರಿಷ್ಕರಣೆ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮತದಾರರ ಹೆಸರು ಪರಿಷ್ಕರಣೆಗೆ ವಿಶೇಷ ಆ್ಯಪ್ ಮತ್ತು ಸಹಾಯವಾಣಿ ಸಂಖ್ಯೆ 1950 ಇದೆ. ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಅರ್ಜಿ ಪಡೆದು ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಯ ದಾಖಲೆಪತ್ರದೊಂದಿಗೆ ಭಾವಚಿತ್ರ ಲಗತ್ತಿಸಿ ಅರ್ಜಿ ಭರ್ತಿ ಮಾಡಿ ನೀಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.