ADVERTISEMENT

ಹಸು ಖರೀದಿಗೆ ಸಾಲ: ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 12:07 IST
Last Updated 19 ಫೆಬ್ರುವರಿ 2020, 12:07 IST

ಕೋಲಾರ: ಜಿಲ್ಲೆಯಲ್ಲಿ ಹಸುಗಳ ಖರೀದಿಗೆ ಡಿಸಿಸಿ ಬ್ಯಾಂಕ್‌ನಿಂದ ಈವರೆಗೆ ನೀಡಿರುವ ಸಾಲ ಏನಾಯಿತು ಮತ್ತು ಸಾಲದ ಹಣದಲ್ಲಿ ಖರೀದಿಸಿದ ಹಸುಗಳು ಎಲ್ಲಿಗೆ ರವಾನೆಯಾಗಿವೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ನಂಜುಂಡಪ್ಪ ಒತ್ತಾಯಿಸಿದ್ದಾರೆ.

ಕೋಚಿಮುಲ್‌ನಲ್ಲಿ ಹಾಲು ಸಂಗ್ರಹಣೆ ಕುಸಿದಿರುವ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರು ಕಳವಳ ವ್ಯಕ್ತಪಡಿಸಿರುವುದು ಹಾಸ್ಯಾಸ್ಪದ. ಡಿಸಿಸಿ ಬ್ಯಾಂಕ್‌ನಿಂದ ಹಸುಗಳ ಖರೀದಿಗೆ ಕೋಟ್ಯಂತರ ರೂಪಾಯಿ ಸಾಲ ವಿತರಿಸಿದ ನಂತರವೂ ಹಾಲು ಉತ್ಪಾದನೆ ಇಳಿಮುಖವಾಗಿರುವುದಕ್ಕೆ ಕಾರಣ ಪತ್ತೆ ಹಚ್ಚಬೇಕು ಎಂದು ನಂಜುಂಡಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ನಿಂದ ಫಲಾನುಭವಿಗಳಿಗೆ ನೇರವಾಗಿ ಸಾಲ ವಿತರಿಸುವ ಬದಲು ಸಾಲದ ಮೊತ್ತಕ್ಕೆ ಹಸುಗಳನ್ನು ಖರೀದಿಸಿ ಕೊಟ್ಟಿದ್ದರೆ ಅಥವಾ ಸಾಲದ ಹಣ ಸದ್ಬಳಕೆಯಾಗಿದ್ದರೆ ಹಾಲು ಉತ್ಪಾದನೆ ಕುಸಿಯುತ್ತಿರಲಿಲ್ಲ. ಸಾಲದ ಹಣ ದುರ್ಬಳಕೆಯಾಗಿರುವ ಬಗ್ಗೆ ಮತ್ತು ಸಾಲದಲ್ಲಿ ಖರೀದಿಸಿದ ಹಸುಗಳನ್ನು ಕದ್ದುಮುಚ್ಚಿ ಮಾರಾಟ ಮಾಡಿರುವ ಬಗ್ಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಹಾಲು ಉತ್ಪಾದನೆ ಗಣನೀಯವಾಗಿ ಕುಸಿದಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿರುವುದು ನಾಚಿಕೆಗೇಡು. ಹೈನೋದ್ಯಮ ವಿಚಾರದಲ್ಲಿ ಭ್ರಷ್ಟಾಚಾರ ನಡೆಸುವುದಕ್ಕೆ ಹೊಂಚು ಹಾಕುತ್ತಿರುವ ಜನಪ್ರತಿನಿಧಿಗಳ ಬೆಂಬಲಿಗರನ್ನು ದೂರವಿಟ್ಟು ನಿಜವಾದ ಹಾಲು ಉತ್ಪಾದಕರ ನೆರವಿಗೆ ಧಾವಿಸಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.