ADVERTISEMENT

ಲಾಕ್‌ಡೌನ್‌: ಸಾಲ ಮರುಪಾವತಿಗೆ ಸಂಕಷ್ಟ

ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು–ಬ್ಯಾಂಕ್‌ ನಡುವೆ ತಿಕ್ಕಾಟ

​ಪ್ರಜಾವಾಣಿ ವಾರ್ತೆ
Published 13 ಮೇ 2021, 14:14 IST
Last Updated 13 ಮೇ 2021, 14:14 IST
ಎಂ.ಗೋವಿಂದಗೌಡ
ಎಂ.ಗೋವಿಂದಗೌಡ   

ಕೋಲಾರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಲದ ಕಂತು ಮರುಪಾವತಿಗೆ ಸಂಕಷ್ಟ ಎದುರಾಗಿದ್ದು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಡಿಸಿಸಿ ಬ್ಯಾಂಕ್‌ ನಡುವೆ ತಿಕ್ಕಾಟ ಆರಂಭವಾಗಿದೆ.

ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ರೀಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಎಲ್ಲಾ ಬಗೆಯ ಸಾಲದ ಕಂತು ಪಾವತಿಗೆ ಆಗಸ್ಟ್‌ ತಿಂಗಳವರೆಗೆ ವಿನಾಯಿತಿ ನೀಡಿತ್ತು. ಆದರೆ, ಈ ಬಾರಿ ಆರ್‌ಬಿಐ ಈವರೆಗೆ ಯಾವುದೇ ವಿನಾಯಿತಿ ಘೋಷಿಸಿಲ್ಲ.

ಡಿಸಿಸಿ ಬ್ಯಾಂಕ್‌ ವ್ಯಾಪ್ತಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 25 ಸಾವಿರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿದ್ದು, ₹ 550 ಕೋಟಿ ಸಾಲ ನೀಡಲಾಗಿದೆ. ಇದೀಗ ಸಾಲ ವಸೂಲಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಬ್ಯಾಂಕ್‌ ಸಿಬ್ಬಂದಿಯು ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಕರೆ ಮಾಡಿ ಸಾಲದ ಕಂತು ಕಟ್ಟುವಂತೆ ಮೌಖಿಕ ಸೂಚನೆ ನೀಡುತ್ತಿದ್ದಾರೆ.

ADVERTISEMENT

ಕೋವಿಡ್‌ ಮತ್ತು ಲಾಕ್‌ಡೌನ್‌ ಸಂಕಷ್ಟದಿಂದ ಎಲ್ಲೆಡೆ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜನರು ಜೀವನ ಮಾಡುವುದೇ ಕಷ್ಟವಾಗಿದೆ. ಲಾಕ್‌ಡೌನ್‌ ಕಾರಣಕ್ಕೆ ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವು ಕಡಿಮೆಯಾಗಿದ್ದು, ಜನಸಾಮಾನ್ಯರು ಬರಿಗೈ ಆಗಿದ್ದಾರೆ.

ಸಾಲದ ಕಂತು ಪಾವತಿ ಅವಧಿ ವಿಸ್ತರಣೆ ಸಂಬಂಧ ರಾಜ್ಯ ಸರ್ಕಾರ ಈವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಹೀಗಾಗಿ ಸಾಲ ವಸೂಲಾತಿ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಹಕಾರಿ ಸಂಸ್ಥೆಗಳಿಗೂ ಗೊಂದಲ ಉಂಟಾಗಿದೆ. ಮತ್ತೊಂದೆಡೆ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸಾಲದ ಕಂತು ಕಟ್ಟಬೇಕೇ ಅಥವಾ ಕಟ್ಟಬಾರದೆ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಸಬ್ಸಿಡಿ ಕೈತಪ್ಪುವ ಭೀತಿ: ಸ್ತ್ರೀಶಕ್ತಿ ಸಂಘಗಳ ಸದಸ್ಯರು ನಿಗದಿತ ಅವಧಿಯೊಳಗೆ ಸಾಲದ ಕಂತು ಕಟ್ಟಿದರೆ ಮಾತ್ರ ಸಹಕಾರಿ ಬ್ಯಾಂಕ್‌ಗಳಿಗೆ ಸರ್ಕಾರದ ಪಾಲಿನ ಬಡ್ಡಿ ಸಬ್ಸಿಡಿ ಬರುತ್ತದೆ. ಇಲ್ಲವಾದರೆ ಬಡ್ಡಿ ಸಬ್ಸಿಡಿ ಕಡಿತಗೊಳಿಸಲಾಗುತ್ತದೆ.

ಬಡ್ಡಿ ಸಬ್ಸಿಡಿ ಕೈತಪ್ಪುವ ಭೀತಿಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಸಾಲ ವಸೂಲಿ ಮಾಡಲು ಮುಂದಾಗಿರುವುದು ಸ್ತ್ರೀಶಕ್ತಿ ಸಂಘಗಳ ಸದಸ್ಯರ ಕಣ್ಣು ಕೆಂಪಾಗಿಸಿದೆ. ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಪ್ರತಿ ವಾರ ಸ್ತ್ರೀಶಕ್ತಿ ಸಂಘಗಳ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಲದ ಕಂತಿನ ಹಣ ಸಂಗ್ರಹ ಪ್ರಕ್ರಿಯೆ ಹಳಿ ತಪ್ಪಿದೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಸಂಘಗಳ ಮೇಲೆ ಬಡ್ಡಿಯ ಹೊರೆ ಬೀಳಲಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಿಂದಿನ ವರ್ಷದಂತೆಯೇ ಸಾಲದ ಕಂತು ಪಾವತಿ ಅವಧಿಯನ್ನು ಕನಿಷ್ಠ 3 ತಿಂಗಳವರೆಗೆ ಮುಂದೂಡಬೇಕು ಎಂಬುದು ಸ್ತ್ರೀಶಕ್ತಿ ಸಂಘಗಳ ಒತ್ತಾಯವಾಗಿದೆ. ಆದರೆ, ಸಹಕಾರಿ ಬ್ಯಾಂಕ್‌ಗಳಿಗೆ ಸಾಲದ ಕಂತು ಪಾವತಿ ಅವಧಿ ಮುಂದೂಡುವ ಅಧಿಕಾರವಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲೇ ನಿರ್ಧಾರವಾಗಬೇಕಿದೆ. ರಾಜ್ಯ ಸರ್ಕಾರ ಆದೇಶ ಹೊರಡಿಸಿ ಸಾಲ ಪಾವತಿ ಅವಧಿ ವಿಸ್ತರಿಸಿದರೆ ಸಮಸ್ಯೆ ಬಗೆಹರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.