ಶ್ರೀನಿವಾಸಪುರ: ‘ಕೋಲಾರವನ್ನು ಆಡಳಿತದಲ್ಲಿ ಮೊದಲು ಸ್ವಚ್ಛ ಜಿಲ್ಲೆಯನ್ನಾಗಿ (ಕ್ಲೀನ್ ಕೋಲಾರ) ಸರಿಪಡಿಸಿ ನಂತರ ರಾಜ್ಯದ ವಿವಿಧೆಡೆ ಕ್ರಮ ಕೈಗೊಳ್ಳುತ್ತೇನೆ. ನನ್ನ ಆಶಯಗಳಿಗೆ ಅಧಿಕಾರಿಗಳು ಕೈಜೋಡಿಸಬೇಕು’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.
ಪಟ್ಟಣ ಹೊರವಲಯದಲ್ಲಿನ ಕನಕ ಸಮುದಾಯ ಭವನದಲ್ಲಿ ಶುಕ್ರವಾರ ಲೋಕಾಯುಕ್ತದಿಂದ ತಾಲ್ಲೂಕಿಗೆ ಸಂಬಂಧಿಸಿದ ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆ, ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಣ ಮಾಡುವುದು ಬಿಡಿ. ಎಂಜಲು ಕಾಸಿಗೆ ಕೈಒಡ್ಡುವವರು ದಯವಿಟ್ಟು ನಮ್ಮ ತಾಲ್ಲೂಕು, ಜಿಲ್ಲೆಯಿಂದ ವರ್ಗಾವಣೆ ಮಾಡಿಸಿಕೊಂಡು ಹೊರಟು ಬಿಡಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಿಶ್ವದಲ್ಲಿ ಭ್ರಷ್ಟಾಚಾರದಲ್ಲಿ ಭಾರತ 96ನೇ ಸ್ಥಾನದಲ್ಲಿದ್ದು, ದೇಶದಲ್ಲಿ ನಮ್ಮ ರಾಜ್ಯ 5ನೇ ಸ್ಥಾನ ಪಡೆದಿದೆ ಎಂದರು.
‘ಎರಡು ತಿಂಗಳ ಹಿಂದೆ ತಾಲ್ಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ಇಲಾಖೆಗಳ 101 ದೂರುಗಳು ವಿಲೇವಾರಿ ಆಗಿವೆ. ಬಾಕಿ ಇರುವ ದೂರುಗಳನ್ನು ಅತಿ ಶೀಘ್ರದಲ್ಲಿ ಪರಿಹಾರ ಮಾಡಿಸಬೇಕು’ ಎಂದು ಅವರು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಆಗಿಂದಾಗ್ಗೆ ಪರಿಹಾರ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ತಾವು ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಿದ್ದು, ಅವರ ಸಮಸ್ಯೆಗಳನ್ನು ಆಲಿಸುವಂತಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡುವುದರಲ್ಲಿ ಅಸಡ್ಡೆ ತೋರಿಸಬಾರದು’ ಎಂದು ಎಚ್ಚರಿಸಿದರು.
‘ಜಿಲ್ಲೆಯಲ್ಲಿನ ಎಲ್ಲ ರೀತಿಯ ಸಮಸ್ಯೆಗಳನ್ನು ಪರಿಹಾರ ಮಾಡುವುದೇ ಎಲ್ಲರ ಮೊದಲ ಆದ್ಯತೆ ಆಗಬೇಕು. ರಾಜ್ಯದಲ್ಲಿ ನಮ್ಮ ಜಿಲ್ಲೆಯನ್ನು ಎಲ್ಲ ರೀತಿಯಲ್ಲಿ ಉತ್ತಮವಾಗಿಸುವ ಉದ್ದೇಶವನ್ನು ಉಪಲೋಕಾಯುಕ್ತರು ಹೊಂದಿದ್ದಾರೆ. ಅದಕ್ಕೆ ಸಾರ್ವಜನಿಕರು, ಅಧಿಕಾರಿಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಪಶು ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ.ಶ್ರೀನಿವಾಸ್, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಮಧುಗಿರಿ ತಹಶೀಲ್ದಾರ್ ಶರೀನ್‍ತಾಜ್, ಲೋಕಾಯುಕ್ತ ನ್ಯಾಯಮೂರ್ತಿ ಆರವಿಂದ್ ಎನ್.ವಿ, ಜಿಲ್ಲಾ ಲೋಕಾಯುಕ್ತ ಅಧೀಕ್ಷಕರ ಆಂತೋಣಿ ಜಾನ್, ಡಿವೈಎಸ್‍ಪಿ ಎಸ್.ಸುಧೀರ್, ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ಇಒ ಸರ್ವೇಶ್, ಚಿಂತಾಮಣಿ ಇಒ ಎಸ್.ಆನಂದ್, ಬಂಗಾರಪೇಟೆ ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ಶಿವಕುಮಾರಿ, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಆಂಜಿನಪ್ಪ, ರೇಣುಕಾ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಹಾಗೂ ವಿವಿಧ ಇಲಾಖೆಗಳ ಇಲಾಖಾಧಿಕಾರಿಗಳು ಇದ್ದರು.
ದಲ್ಲಾಳಿಗಳನ್ನು ದೂರವಿಡಿ
‘ದಲ್ಲಾಳಿಗಳನ್ನು ಬದಿಗೊಟ್ಟು ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿ ಪರಿಹರಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಯ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳುವ ಅವಕಾಶವಿದೆ. ಅದನ್ನು ಬಿಟ್ಟು ಮಧ್ಯವರ್ತಿಗಳ ಬಳಿ ಹೋದರೆ ಎರಡು ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ಕೊಡಬಾರದು’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.