ADVERTISEMENT

ಸಂಪೂರ್ಣ ಸಾಕ್ಷರ ಗ್ರಾಮ ರೂಪಿಸಿ: ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ.ಸ್ನೇಹಾ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 13:26 IST
Last Updated 15 ಸೆಪ್ಟೆಂಬರ್ 2021, 13:26 IST
ಕೋಲಾರದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ.ಸ್ನೇಹಾ ಸಾಕ್ಷರತಾ ಪ್ರತಿಜ್ಞಾವಿಧಿ ಬೋಧಿಸಿದರು
ಕೋಲಾರದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ.ಸ್ನೇಹಾ ಸಾಕ್ಷರತಾ ಪ್ರತಿಜ್ಞಾವಿಧಿ ಬೋಧಿಸಿದರು   

ಕೋಲಾರ: ‘ಜಾತಿ, ಧರ್ಮ, ಮತ ಭೇದ ಬಿಟ್ಟು ಪ್ರತಿ ಅನಕ್ಷರಸ್ಥರಿಗೂ ಅಕ್ಷರ ಕಲಿಸುವ ಮೂಲಕ ಸಂಪೂರ್ಣ ಸಾಕ್ಷರ ಗ್ರಾಮ ರೂಪಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ.ಸ್ನೇಹಾ ಕಿವಿಮಾತು ಹೇಳಿದರು.

ಇಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಮಾತನಾಡಿ, ‘ಸಾಕ್ಷರತೆಯಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಸತ್ಯ ಅರಿತು ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಮೂಡಿಸಿ’ ಎಂದು ಸಲಹೆ ನೀಡಿದರು.

‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಪ್ರತಿ ಮನೆಯೂ ಅಕ್ಷರ ಕಲಿಕಾ ಕೇಂದ್ರವಾಗಲಿ. ಪ್ರತಿಯೊಬ್ಬರೂ ಅಕ್ಷರಸ್ಥರಾಗಲಿ ಎಂಬ ಧ್ಯೇಯದೊಂದಿಗೆ ಸಾಕ್ಷರತಾ ಪ್ರೇರಕರು ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳ ಕುರಿತು ಅರಿವು ಪಡೆಯಲು ಅಕ್ಷರ ಜ್ಞಾನದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸರ್ಕಾರದ ಸಾಕಷ್ಟು ಯೋಜನೆಗಳು ಅನಕ್ಷರಸ್ಥರಿಗೆ ತಲುಪುವುದೇ ಇಲ್ಲ. ಇದರಿಂದ ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಸಾಕ್ಷರರಾಗುವ ಅಗತ್ಯವಿದೆ. ತಂತ್ರಜ್ಞಾನ ಮುಂದುವರಿದಿದ್ದು, ಅಕ್ಷರದ ಜತೆಗೆ ಡಿಜಿಟಲ್ ಕಲಿಕೆಗೂ ಒತ್ತು ನೀಡಬೇಕು’ ಎಂದು ಸೂಚಿಸಿದರು.

‘ಜನರ ಸಾಕ್ಷರರಾದರೆ ಅಕ್ಷರದ ಜತೆಗೆ ಆರೋಗ್ಯ ಮತ್ತು ಅಭಿವೃದ್ಧಿ ಅವರದ್ದಾಗುತ್ತದೆ. ಅಕ್ಷರ ಜ್ಞಾನದಿಂದ ಬದುಕು ಉಜ್ವಲವಾಗುತ್ತದೆ’ ಎಂದು ಲೋಕ ಶಿಕ್ಷಣ ಸಮಿತಿ ಕಾರ್ಯಕ್ರಮ ಸಹಾಯಕ ಡಿ.ಆರ್.ರಾಜಪ್ಪ ಹೇಳಿದರು.

ರತ್ನಮಾಲಾ ಮಹಿಳಾ ಮಂಡಳಿ ಕಾರ್ಯದರ್ಶಿ ರತ್ನಮಾಲಾ, ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಳಿನಿ, ಲೋಕ ಶಿಕ್ಷಣ ಸಮಿತಿ ಕಾರ್ಯಕ್ರಮದ ತಾಲ್ಲೂಕು ಸಂಯೋಜಕ ಸಿ.ಅಶ್ವತ್ಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.