ADVERTISEMENT

ಮಕ್ಕಳು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 14:49 IST
Last Updated 6 ಏಪ್ರಿಲ್ 2022, 14:49 IST
ಕೋಲಾರ ತಾಲ್ಲೂಕಿನ ಸೀತಿ ಗ್ರಾಮದಲ್ಲಿ ಪತೇಶ್ವರಸ್ವಾಮಿ ಮತ್ತು ಭೈರವೇಶ್ವರ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್, ನಟಿ ಹರಿಪ್ರಿಯಾ ಪಾಲ್ಗೊಂಡರು
ಕೋಲಾರ ತಾಲ್ಲೂಕಿನ ಸೀತಿ ಗ್ರಾಮದಲ್ಲಿ ಪತೇಶ್ವರಸ್ವಾಮಿ ಮತ್ತು ಭೈರವೇಶ್ವರ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್, ನಟಿ ಹರಿಪ್ರಿಯಾ ಪಾಲ್ಗೊಂಡರು   

ಕೋಲಾರ: ‘ಜನರು ದೈನಂದಿನ ಕೆಲಸ ಕಾರ್ಯಗಳಿಂದ ಜಂಜಾಟದಲ್ಲಿ ಇರುತ್ತಾರೆ. ಜಾತ್ರೆಗಳಿಂದ ಎಲ್ಲರೂ ಒಗ್ಗೂಡುವ ವಾತಾವರಣ ನಿರ್ಮಾಣ ಆಗುವುದರಿಂದ ಜಾತಿ, ಧರ್ಮದ ಬೇಧ ಭಾವ ಮರೆತು ಸಂತಸದಿಂದ ಪಾಲ್ಗೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್ ಕಿವಿಮಾತು ಹೇಳಿದರು.

ತಾಲ್ಲೂಕಿನ ಸೀತಿ ಗ್ರಾಮದಲ್ಲಿ ಪತೇಶ್ವರಸ್ವಾಮಿ ಮತ್ತು ಭೈರವೇಶ್ವರ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಜಾತ್ರೆಗಳಿಂದ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಶಕ್ತಿಯು ದೇವರು ನೀಡುತ್ತಾನೆ. ದೇವರ ಭಕ್ತಿಯಲ್ಲಿ ತಲ್ಲೀನರಾದರೆ ಜನರ ಕಷ್ಟ ಪರಿಹಾರವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಯುವಕರು ತಂದೆ ತಾಯಿಯನ್ನು ಗೌರವಿಸಬೇಕು. ದುಶ್ಚಟಗಳಿಗೆ ದಾಸರಿಗೆ ದಾರಿ ತಪ್ಪುವ ಬದಲು ವಿದ್ಯಾವಂತರಾಗಿ ಸರಿ ದಾರಿಯಲ್ಲಿ ನಡೆಯಬೇಕು. ಹುಟ್ಟಿದ ಊರು, ಪೋಷಕರು ಹಾಗೂ ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು. ಪಾಶ್ಚಿಮಾತ್ಯ ಸಂಸ್ಕೃತಿ ಅಂಧಾನುಕರಣೆ ಮಾಡದೆ ವಿದ್ಯಾವಂತರಾಗಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಕಳೆದ 2 ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಜನ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದೀಗ ಕೋವಿಡ್‌ ಆತಂಕ ದೂರವಾಗಿ ಜಾತ್ರೆ, ಸಮಾರಂಭ ನಡೆಯುತ್ತಿವೆ. ಎಲ್ಲರೂ ಹೆಚ್ಚಾಗಿ ಕನ್ನಡ ಸಿನಿಮಾ ನೋಡಬೇಕು. ನಾನೂ ಸಹ ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದು, ಇಂತಹ ಕಾರ್ಯಕ್ರಮಗಳಿಗೆ ಸಹಕರಿಸುತ್ತೇನೆ’ ಎಂದು ನಟಿ ಹರಿಪ್ರಿಯಾ ಭರವಸೆ ನೀಡಿದರು.

‘ಮನುಷ್ಯನಿಗೆ ಎಷ್ಟೇ ಕಷ್ಟವಿದ್ದರೂ ನಗುವಿನಿಂದ ಎಲ್ಲವನ್ನೂ ಮರೆಯಲು ಸಾಧ್ಯವಾಗುತ್ತದೆ. ಜನರು ದಿನನಿತ್ಯದ ಕೆಲಸದ ಒತ್ತಡದಿಂದ ನಗುವುದನ್ನೇ ಮರೆತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜೀವನ ಬದಲಾವಣೆಯಾಗುತ್ತದೆ’ ಎಂದು ಹಾಸ್ಯ ಕಲಾವಿದೆ ಸುಧಾ ಬರಗೂರು ತಿಳಿಸಿದರು.

ಗಾಯಕ ಸುಬ್ರಮಣಿ, ಸರಿಗಮಪ ಖ್ಯಾತಿಯ ಕಲಾವಿದರು ಹಾಡು, ನೃತ್ಯದ ಮೂಲಕ ಜನರನ್ನು ರಂಜಿಸಿದರು. ಮುಖಂಡರಾದ ನಾಗೇಶ್, ‌ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಮುರಳಿಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.