ADVERTISEMENT

ಆರ್ಥಿಕ ಸ್ವಾವಲಂಬನೆ ಸಾಧಿಸಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 13:20 IST
Last Updated 6 ಫೆಬ್ರುವರಿ 2019, 13:20 IST
ಧಾನ್ ಪ್ರತಿಷ್ಠಾನವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾಕಥಾನ್–2019 ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.
ಧಾನ್ ಪ್ರತಿಷ್ಠಾನವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾಕಥಾನ್–2019 ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ಮಹಿಳಾ ಸ್ವಸಹಾಯ ಸಂಘಗಳು ಸಾಲ ಪಡೆಯುವುದಕ್ಕಷ್ಟೇ ಸೀಮಿತರಾಗದೆ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ತುಳಸಿರಾಮ್‌ ಕಿವಿಮಾತು ಹೇಳಿದರು.

ಧಾನ್ ಪ್ರತಿಷ್ಠಾನವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾಕಥಾನ್–2019 ಮಹಿಳಾ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯ ಬಹುಪಾಲು ಮಹಿಳಾ ಸ್ವಸಹಾಯ ಸಂಘಗಳು ಪಡೆದ ಸಾಲವನ್ನು ಅಗತ್ಯಕ್ಕೆ ಬಳಸಿಕೊಂಡು ಶೇ 100ರಷ್ಟು ಮರುಪಾವತಿ ಮಾಡುತ್ತಿವೆ’ ಎಂದರು.

‘ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಮೌಲ್ಯವರ್ಧನೆ, ಸಂಸ್ಕರಣೆಯಂತಹ ಕಾರ್ಯಗಳತ್ತ ಗಮನ ಹರಿಸಬೇಕು. ಕೃಷಿ ವಿಜ್ಞಾನ ಕೇಂದ್ರವು ತರಬೇತಿ, ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ ಮೂಲಕ ರೈತ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಿದೆ. ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದರೆ ಮಾರುಕಟ್ಟೆಗೆ ಸಮಸ್ಯೆಯಿಲ್ಲ. ಈ ಬಗ್ಗೆ ಆಸಕ್ತರಿಗೆ ತರಬೇತಿ ನೀಡಲಾವುದು’ ಎಂದು ತಿಳಿಸಿದರು.

ADVERTISEMENT

‘ಮಾ.8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಈಗಾಗಲೇ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಸಿಕ್ಕಿದೆ. ರಾಜಕೀಯದಲ್ಲಿ ಶೇ 33ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆ 1995ರಿಂದಲೂ ಇದೆ. ಮುಂದಿನ ದಿನಗಳಲ್ಲಿ ಮಸೂದೆ ಜಾರಿಯಾದ ನಂತರ ಮಹಿಳೆಯರು ಇನ್ನಷ್ಟು ಸುಧಾರಣೆ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು.

ಸೂಕ್ಷ್ಮತೆ ಕಡಿಮೆ: ‘ಮಹಿಳಾ ಸಬಲೀಕರಣ ಎಂದರೆ ಮಹಿಳೆಗೆ ಸ್ವಾತಂತ್ರ್ಯ, ಸಮಾನತೆ ಕಲ್ಪಿಸುವುದು ಎಂಬ ಮಾತು ವ್ಯಕ್ತವಾಗುತ್ತದೆ. ಮಹಿಳೆಯರ ಬಗೆಗಿನ ಸೂಕ್ಷ್ಮತೆ ಕಡಿಮೆಯಿರುವುದು ದೇಶದ ಬಹುಮುಖ್ಯ ಸಮಸ್ಯೆ. ಮಹಿಳಾ ಸೂಕ್ಷ್ಮತೆ ಬಾರದಿದ್ದರೆ ಸಬಲೀಕರಣ ಕಾಣಲು ಸಾಧ್ಯವಿಲ್ಲ’ ಎಂದು ಧಾನ್ ಪ್ರತಿಷ್ಠಾನದ ವಲಯ ಸಂಯೋಜಕ ಕಿರಣ್‌ಕುಮಾರ್ ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಳಾ ಸಬಲೀಕರಣದ ಘೋಷಣೆಯೊಂದಿಗೆ ಜಾಥಾ ನಡೆಸಲಾಯಿತು. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಕೋಲಾರದ ಅನ್ನಪೂರ್ಣಮ್ಮ, ಮಾಲೂರು ತಾಲ್ಲೂಕು ದೊಡ್ಡಕಲ್ಲಹಳ್ಳಿಯ ಲಕ್ಷ್ಮಮ್ಮ, ಮುಳಬಾಗಿಲಿನ ಸುಬ್ಬಕ್ಕ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಪ್ರತಿನಿಧಿ ಭಾಗ್ಯಮ್ಮ, ಮಾಲೂರಿನ ರೈತ ಒಕ್ಕೂಟದ ಉಪಾಧ್ಯಕ್ಷ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.