ADVERTISEMENT

ಮಾಲೂರು: 1909ರ ಸರ್ಕಾರಿ ಶಾಲೆಗೆ ಹೊಸ ರೂಪ

ಬ್ರಿಟಿಷರ ವಾಸ್ತುಶಿಲ್ಪ ಹೊಂದಿರುವ ಸರ್ಕಾರಿ ಶಾಲೆಗೆ ನವೀಕರಣ ಭಾಗ್ಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:31 IST
Last Updated 22 ಅಕ್ಟೋಬರ್ 2025, 6:31 IST
ಮಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೋಟ
ಮಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೋಟ   

ಮಾಲೂರು: ಸ್ವಾತಂತ್ಯ್ರ ಪೂರ್ವದಲ್ಲಿ ಆರಂಭವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಅಧಿಕಾರಿಗಳ ಸತತ ಪ್ರಯತ್ನದಿಂದ ಬ್ರಿಟಿಷ್ ವಾಸ್ತುಶಿಲ್ಪ ಹೊಂದಿರುವ ಕಟ್ಟಡ ನವೀಕರಣಗೊಳ್ಳುತ್ತಿದೆ.

ನಗರದ ಹೃದಯ ಭಾಗದಲ್ಲಿ 1909ರಲ್ಲಿ ಆರಂಭವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 112 ವರ್ಷಗಳನ್ನು ಪೂರೈಸಿದೆ. ಈ ಶಾಲೆಯ ಹಳೆ ವಾಸ್ತುಶಿಲ್ಪದಂತೆ ನವೀಕರಣಗೊಳ್ಳುತ್ತಿರುವುದು ವಿಶೇಷವಾಗಿದೆ.

ಶತಮಾನಗಳಿಂದ ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಈ ಶಾಲೆ ವಿದ್ಯಾದಾನ ಮಾಡಿದೆ. ಈ ಶಾಲೆಯಲ್ಲಿ ಕಲಿತವರು ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ಶಾಲಾ ಶಿಥಿಲಾವಸ್ಥೆ ತಲುಪಿತ್ತು. ಹಾಗಾಗಿ ಇಲ್ಲಿನ ಬಿಇಒ ಚಂದ್ರಕಲಾ ಹಾಗೂ ಸಿಆರ್‌ಪಿ ನಾಗರಾಜ್ ಅವರ ಸತತ ಪ್ರಯತ್ನದಿಂದ ಆಂಧ್ರಪ್ರದೇಶದ ಯುನೈಟೆಡ್ ಹೈದರಬಾದ್ ಸಂಸ್ಥೆ ವತಿಯಿಂದ ಸುಮಾರು ₹25 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿ ಭರದಿಂದ ಸಾಗಿದೆ.

ADVERTISEMENT

ಸುಸಜ್ಜಿತ ಕೊಠಡಿ, ಕ್ರೀಡಾಂಗಣ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಪ್ರಯೋಗಾಲಯ, ಶೌಚಾಲಯ ಸೇರಿದಂತೆ ಮಕ್ಕಳ ಸಮೃದ್ಧ ಜೀವನಕ್ಕೆ ಅಡಿಪಾಯ ಹಾಕಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಬ್ರಿಟಿಷರು ನಿರ್ಮಾಣ ಮಾಡಿರುವ ಶೈಲಿಯನ್ನೇ ಉಳಿಸಿಕೊಂಡು ನವೀಕರಣ ಮಾಡಲಾಗುತ್ತಿದೆ. ಸಾಧಕರ ಬಗ್ಗೆ ಗೋಡೆ ಬರಹಗಳು ಆಕರ್ಷನೀಯವಾಗಿದೆ. ಜೊತೆಗೆ ಬೆಂಗಳೂರಿನ ಯೂತ್ ಫಾರ್ ಸೇವಾ ಸಮಿತಿ ವತಿಯಿಂದ ₹12 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಎರಡು ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 1ರಿಂದ 8 ನೇ ತರಗತಿವರೆಗೆ 230 ವಿದ್ಯಾರ್ಥಿಗಳು ಓದುತ್ತಿದ್ದಾರೆ. 8 ಮಂದಿ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಶಿಥಿಲಾವಸ್ಥೆ ತಲುಪಿದ್ದ ಸರ್ಕಾರಿ ಶಾಲೆ ನವೀಕರಣಗೊಳ್ಳುತ್ತಿರುವುದು ಪಟ್ಟಣದ ಜನತೆಗೆ ಸಂತಸ ತಂದಿದೆ.

ಶಾಲಾ ಗೋಡೆ ಮೇಲೆ ಸಾಧಕರ ಚಿತ್ರ ಬಿಡಿಸುತ್ತಿರುವ ಕಲಾವಿದ
ಹೈಟೆಕ್ ಶೌಚಾಲಯ

2026ಕ್ಕೆ ಒಂದನೇ ತರಗತಿಗೆ ಇಂಗ್ಲಿಷ್ ಮಾಧ್ಯಮ ಆರಂಭ   ಮುಂದಿನ ವರ್ಷದಿಂದ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಪೋಷಕರು ಈಗಾಗಲೇ ಮಕ್ಕಳನ್ನು ದಾಖಲಿಸಲು ಮುಂದಾಗಿರುವುದು ಸಂತಸದ ಸಂಗತಿ. ಹಾಗಾಗಿ  ಮುಂದಿನ ವರ್ಷದಿಂದ ದಾಖಲಾತಿ ಏರಿಕೆಯಾಗಲಿದೆ. ಈಗಾಗಲೇ ಆರು ಏಳು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮ ಆರಂಭವಾಗಿದೆ.

–ವಿಜಯಕುಮಾರಿ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಭರದಿಂದ ಸಾಗುತ್ತಿದೆ ಕಾಮಗಾರಿ ಶತಮಾನ ಕಂಡ ಸರ್ಕಾರಿ ಶಾಲೆ ಇದಾಗಿದೆ. ಬಿಇಒ ಚಂದ್ರಕಲಾ ಸಿಆರ್‌ಪಿ ನಾಗರಾಜ್ ಹಾಗೂ ಶಿಕ್ಷಕಿ ವಿಜಯಕುಮಾರಿ ಅವರ ಸಹಕಾರದಿಂದ ನವೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ. ಶಿಕ್ಷಣಕ್ಕೆ ಈ ಶಾಲೆಯಲ್ಲಿ ಉತ್ತಮ ವಾತಾವರಣವಿದೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಲು ಮುಂದಾಗಬೇಕು.

–ವಿ.ಮುನಿರತ್ನಮ್ಮ ಶಾಲಾ ಮುಖ್ಯ ಶಿಕ್ಷಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.