ADVERTISEMENT

ಮಾಲೂರು ವಿಧಾನಸಭಾ ಕ್ಷೇತ್ರ: ಪಾರದರ್ಶಕ ಮರು ಮತ ಎಣಿಕೆಗೆ ಮನವಿ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಛಲವಾದಿ ನೇತೃತ್ವದ ಬಿಜೆಪಿ ನಿಯೋಗ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 6:06 IST
Last Updated 11 ನವೆಂಬರ್ 2025, 6:06 IST
<div class="paragraphs"><p>ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಬೇಕೆಂದು ಕೋರಿ ಕೋಲಾರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಆರ್‌.ರವಿಗೆ ಅವರಿಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯ ಕೇಶವ ಪ್ರಸಾದ್‌ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.&nbsp;</p></div>

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಬೇಕೆಂದು ಕೋರಿ ಕೋಲಾರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಆರ್‌.ರವಿಗೆ ಅವರಿಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯ ಕೇಶವ ಪ್ರಸಾದ್‌ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು. 

   

ಕೋಲಾರ: ಸುಪ್ರೀಂ ಕೋರ್ಟ್‌ ನಿರ್ದೇಶನ ಹಾಗೂ ಚುನಾವಣಾ ಆಯೋಗದ ಸೂಚನೆಗಳಂತೆ ಪಾರದರ್ಶಕ ಹಾಗೂ ನ್ಯಾಯಯುತವಾಗಿ ಮಾಲೂರು ಕ್ಷೇತ್ರದ ಮರು ಮತ ಎಣಿಕೆ ನಡೆಸಬೇಕು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸದಸ್ಯ ಕೇಶವ ಪ್ರಸಾದ್ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರಿಗೆ ಮನವಿ ಸಲ್ಲಿಸಿತು.

‘ಫಾರಂ 17 (ಎ), ಫಾರಂ 17 (ಸಿ) ಭಾಗ–1, ಫಾರಂ 17 (ಸಿ) ಭಾಗ–2, ವಿವಿ ಪ್ಯಾಟ್ ಚೀಟಿಗಳು ಹಾಗೂ ಇವಿಎಂ ಮತಗಳು ಪರಸ್ಪರ ಹೊಂದಾಣಿಕ ಆಗುವಂತಿರಬೇಕು. ಈ ಐದು ಹಂತಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಮತಗಟ್ಟೆಯಲ್ಲಿನ ಮತ ಎಣಿಕೆ ಕಾರ್ಯವನ್ನು ವಿಡಿಯೋ ಚಿತ್ರೀಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಈ ಐದು ಹಂತಗಳಲ್ಲಿ ಯಾವುದೇ ಹೊಂದಾಣಿಕೆ ಕಂಡು ಬಾರದಿದ್ದರೆ ಅವುಗಳನ್ನು ಮತ ಎಣಿಕೆ ಉಸ್ತುವಾರಿ, ಮೇಲ್ವಿಚಾರಕರ ಸಮ್ಮುಖದಲ್ಲಿ ಸೂಕ್ತ ಕ್ರಮದಲ್ಲಿ ದಾಖಲೀಕರಿಸಬೇಕು ಎಂದರು.

ಇವಿಎಂಗಳಲ್ಲಿನ ಮತಗಳ ಎಣಿಕೆ ನಡೆಸಿ ವಿವಿ ಪ್ಯಾಟ್‌ನಲ್ಲಿನ ಚೀಟಿಗಳಿಗೆ ತಾಳೆ ಮಾಡಿ ಹೊಂದಾಣಿಕೆಯಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಹೇಳಿದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘2023ರಲ್ಲೇ ನಾವು ಮರು ಮತ ಎಣಿಕೆಗೆ ಆಗ್ರಹಿಸಿದ್ದೆವು. ಆದರೆ, ಪುರಸ್ಕರಿಸಿರಲಿಲ್ಲ. ಈಗ ನೋಡಿದರೆ ಆ ಪ್ರಕ್ರಿಯೆಗೆ ಸಂಬಂಧಿಸಿದ ವಿಡಿಯೋ ಇಲ್ಲ. ಈ ಸಲ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ನಮ್ಮ ಅನುಮಾನ ಬಗೆಹರಿಸುವ ರೀತಿ ಎಣಿಕೆ ನಡೆಸಬೇಕು. ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಬೇಕು. ಇಲ್ಲದಿದ್ದರೆ ಮತ್ತೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಕೇಶವ್ ಪ್ರಸಾದ್ ಮಾತನಾಡಿ, ‘ಜಿಲ್ಲಾಡಳಿತ ಮಂಗಳವಾರ ನಡೆಯುವ ಮತ ಎಣಿಕೆಯ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. 2023ರ ಚುನಾವಣೆಯ ಮತ ಎಣಿಕೆ ವೇಳೆ ಅಧಿಕಾರಿಗಳ ಮೇಲೆ ಕಾಂಗ್ರೆಸ್‌ ಒತ್ತಡ ಹೇರುವ ಕೆಲಸ ಮಾಡಿತ್ತು. ಈಗಲೂ ಸರ್ಕಾರ ಒತ್ತಡ ಹೇರಬಹುದೆಂಬ ಆತಂಕ ನಮಗಿದೆ. ಅಧಿಕಾರಿಗಳು ನಿಷ್ಪಕ್ಷವಾಗಿ ಮರು ಎಣಿಕೆ ನಡೆಸಬೇಕು ಎಂದು ಆಗ್ರಹಿಸಿದರು.

ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ವಕ್ತಾರ ಅಶ್ವತ್ಥನಾರಾಯಣ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ವಕೀಲರು ಇದ್ದರು.

ಭದ್ರತೆ ಕೊಠಡಿಯಲ್ಲಿ ನ್ಯೂನತೆ: ಮಂಜುನಾಥಗೌಡ ಆರೋಪ

‘ಭದ್ರತಾ ಕೊಠಡಿಯಲ್ಲಿ ಇಟ್ಟಿರುವ ಚುನಾವಣಾ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಹಲವಾರು ನ್ಯೂನತೆ ಕಂಡುಬಂದಿದೆ. ಅಂಚೆ ಮತಗಳು ಇರುವ ಪೆಟ್ಟಿಗೆಯ ಸೀಲ್ ತೆರೆದುಕೊಂಡಿದೆ. ಕೆಲ ಇವಿಎಂ, ವಿವಿ ಪ್ಯಾಟ್‌ಗಳನ್ನು ಕೂಡ ಕ್ರಮವಾಗಿ ಇಟ್ಟಿಲ್ಲ. ಎಲ್ಲಾ ಮತಗಟ್ಟೆಗಳ ವಿವಿ ಪ್ಯಾಟ್‌ ಚೀಟಿಗಳನ್ನು ತಾಳೆ ಮಾಡಿ ನೋಡಬೇಕು.‌ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಬೇಕು’ ಎಂದು ಪರಾಜಿತ ಅಭ್ಯರ್ಥಿ ಕೆ.ಎಸ್‌.ಮಂಜುನಾಥಗೌಡ ಆಗ್ರಹಿಸಿದರು.

ಈ ಕ್ರಮ ಅನುಸರಿಸದಿದ್ದರೆ ನಾನು ಮತ್ತೆ ನ್ಯಾಯಾಲಯ ಮೊರೆ ಹೋಗಬೇಕಾಗುತ್ತದೆ. ಅಲ್ಲದೇ, ಮರು ಚುನಾವಣೆ ನಡೆಯುವ ಸಾಧ್ಯತೆ ಸೃಷ್ಟಿಯಾಗಬಹುದು ಎಂದು ಎಚ್ಚರಿಕೆ ನೀಡಿದರು.

ಯಾವುದೇ ಒತ್ತಡಕ್ಕೆ ಅಧಿಕಾರಿಗಳು ಮಣಿಯದೆ ಮಾಲೂರು ಕ್ಷೇತ್ರದ ‌ಮತ ಎಣಿಕೆ ನಡೆಸಬೇಕು. ಸರ್ಕಾರ ಮೂಗು ತೂರಿಸಬಾರದು. ನ್ಯಾಯಾಲಯದ ನಿರ್ದೇಶನದಂತೆ ನಡೆಯಬೇಕು
ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.