
ಮಾಲೂರು: ಇತ್ತೀಚೆಗೆ ನಕಲಿ ಯೂಟ್ಯೂಬ್ ಮತ್ತು ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ ದಂಧೆಗೆ ಕಡಿವಾಣ ಹಾಕಬೇಕೆಂದು ನಮ್ಮ ಕರ್ನಾಟಕ ಸೇನೆ ಮತ್ತು ಅಂಬೇಡ್ಕರ್ ವಾದ ಸಂಘಟನೆ ಕಾರ್ಯಕರ್ತರು ತಹಶೀಲ್ದಾರ್ ಎಂ.ವಿ.ರೂಪ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ನಮ್ಮ ಕರ್ನಾಟಕ ಸೇನೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಾಜು ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಜವಾಬ್ದಾರಿ ಹೊತ್ತಿದೆ. ತಮ್ಮ ಬರವಣಿಗೆಯ ಮೂಲಕ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತುವ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಕ್ಷೇತ್ರದಲ್ಲಿ ಬಹಳಷ್ಟು ಮಂದಿ ನಿಷ್ಠಾವಂತ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನಧಿಕೃತ ಯೂಟ್ಯೂಬ್, ಪತ್ರಿಕೆ, ದೃಶ್ಯ ಮಾಧ್ಯಮಗಳ ಹೆಸರಿನಲ್ಲಿ ನಕಲಿ ಪತ್ರಕರ್ತರು ಹುಟ್ಟಿ ಕೊಂಡಿರುವುದು ಪ್ರಾಮಾಣಿಕ ಪತ್ರಕರ್ತರಿಗೆ ಮುಜುಗರ ಉಂಟು ಮಾಡುತ್ತಿದೆ ಎಂದರು.
ಇಂತಹ ನಕಲಿ ಪತ್ರಕರ್ತರು ಮಾಲೂರು ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಮೊಬೈಲ್ ಹಿಡಿದವರೆಲ್ಲಾ ಪತ್ರಕರ್ತರಾಗಿ ಸೃಷ್ಟಿಯಾಗಿದ್ದಾರೆ. ಕೆಲವರು ಕೋಲಾರದಿಂದ ಮಾಲೂರಿನತ್ತ ಕಾರ್ಯಕ್ರಮಗಳಿಗೆ ಬಂದು ಇಲ್ಲಿನ ವಾತಾವರಣ ಹಾಳು ಮಾಡುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಪರಿಶೀಲನೆ ನಡೆಸಿ ನಕಲಿ ಪತ್ರಕರ್ತರನ್ನು ಮಟ್ಟಹಾಕಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ತಹಶೀಲ್ದಾರ್ ಎಂ.ವಿ.ರೂಪ ಹಾಗೂ ಪೋಲಿಸ್ ಇನ್‌ಸ್ಪೆಕ್ಟರ್ ರಾಮಪ್ಪ ಗುತ್ತೆದಾರ್ ಅವರಿಗೆ ಮನವಿ ಸಲ್ಲಿಸಿದರು.
ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್, ಸಂಚಾಲಕ ಕೋಡೂರು ಗೋಪಾಲ್, ಉಪಾಧ್ಯಕ್ಷ ಆಟೊ ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಆಂಜಿ ಕನ್ನಡಿಗ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಎನ್.ಜಗದೀಶ್, ಗೌರವಾಧ್ಯಕ್ಷ ಡಿ.ಎನ್.ಗೋಪಾಲ್, ಹೆಡಗಿನಬೆಲೆ ಚನ್ನಕೃಷ್ಣ, ಗುಡ್ನಹಳ್ಳಿ ನಂದೀಶ್, ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರು ವೆಂಕಟೇಶ್, ರುದ್ರೇಶ್, ಕಿಶೋರ್, ಆಟೊ ಮಂಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.