
ಮಾಲೂರು: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಬೀಳುವ ಕಸವನ್ನು ನಗರಸಭೆಯ ಕಸದ ವಾಹನಕ್ಕೆ ಹಾಕಬೇಕು. ರಸ್ತೆಯಲ್ಲಿ ಸುರಿಯಬಾರು. ರಸ್ತೆಯಲ್ಲಿ ಕಸ ಹಾಕುವವರನ್ನು ಗುರುತಿಸಿ ದಂಡ ವಿಧಿಸಲಾಗುವುದು ಎಂದು ನಗರಸಭೆಯ ಪರಿಸರ ಎಂಜಿನಿಯರ್ ಶಾಲಿನಿ ಎಚ್ಚರಿಕೆ ನೀಡಿದರು.
ನಗರದ ತರಕಾರಿ ಮಾರುಕಟ್ಟೆ, ಮಾರಿಕಾಂಬ ವೃತ್ತ , ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೀದಿಬದಿ ವ್ಯಾಪರಸ್ಥರ ರಸ್ತೆ ಅತಿಕ್ರಮಣ ತೆರವು ಹಾಗೂ ಪ್ಲಾಸ್ಟಿಕ್ ವಶಪಡಿಸಿಕೊಂಡು ಮಾತನಾಡಿದರು.
ಬೀದಿಬದಿ ವ್ಯಾಪಾರಿಗಳು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಹಾಕದೆ ಕಸದ ವಾಹನಕ್ಕೆ ಹಾಕಬೇಕು. ನಾಗರಿಕರು ಹಸಿ ಕಸ, ಒಣ ಕಸ ವಿಂಗಡಿಸಿ ವಾಹನಕ್ಕೆ ಹಾಕಬೇಕು. ಎಲ್ಲರೂ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಕೆಲವರು ಎಲ್ಲೆಂದರಲ್ಲೇ ಕಸ ಹಾಕುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಕೆಲವು ಸ್ಥಳಗಳಲ್ಲಿ ನಗರಸಭೆ ವತಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕಸ ಹಾಕುವವರ ಮಾಹಿತಿ ಪಡೆದು ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭೆ ವತಿಯಿಂದ ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವರ್ತಕರು ಪ್ಲಾಸ್ಟಿಕ್ ಬಳಕೆ ಮಾಡಬಾರದು. ಬಳಕೆ ಮಾಡಿದ್ದು ಕಂಡು ಬಂದಲ್ಲಿ ಅಂತಹ ಅಂಗಡಿಗಳ ಮೇಲೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಕಿರಿಯ ಅಧಿಕಾರಿ ರಾಜಣ್ಣ, ವೆಂಕಟೇಶ್, ಮುನಿರಾಜು, ಲಕ್ಷ್ಮಣ್, ಸೌಮ್ಯ, ನಾಗಮಣಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.