ADVERTISEMENT

ಮಾಲೂರು | ‘ದಂಗೆಗೆ ಪ್ರಚೋದನೆ: ಕೀಳು ಸಂಸ್ಕೃತಿ’

ಇದು ಮಾಲೂರು ಸಂಸ್ಕೃತಿ ಅಲ್ಲ; ಹೊಸಕೋಟೆ ಸಂಸ್ಕೃತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:21 IST
Last Updated 24 ಸೆಪ್ಟೆಂಬರ್ 2025, 7:21 IST
ಮಾಲೂರು ನಗರದ ನಗರದ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ಮಾಲೂರು ಮತ್ತು ಮಾಸ್ತಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆವೈ.ನಂಜೇಗೌಡ ಮಾತನಾಡಿದರು.
ಮಾಲೂರು ನಗರದ ನಗರದ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ಮಾಲೂರು ಮತ್ತು ಮಾಸ್ತಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆವೈ.ನಂಜೇಗೌಡ ಮಾತನಾಡಿದರು.   

ಮಾಲೂರು: ‘ಮಾಲೂರಿನ ಜನ ನೇಪಾಳದ ರೀತಿ ದಂಗೆ ಏಳುತ್ತಾರೆ’ ಎಂದು ಮಾಜಿ ಶಾಸಕ ಮಂಜುನಾಥಗೌಡ ತಾಲ್ಲೂಕಿನ ಜನರನ್ನು ದಂಗೆ ಏಳಲು ಪ್ರಚೋದಿಸುತ್ತಿದ್ದಾರೆ ಎಂದು ಶಾಸಕ ಕೆ.ವೈ. ನಂಜೇಗೌಡ ಹರಿಹಾಯ್ದಿದ್ದಾರೆ.

‘ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ಈ ರೀತಿ ಕೀಳಾಗಿ ಮಾತನಾಡುವುದು ಮಾಲೂರಿನ ಸಂಸ್ಕೃತಿಯಲ್ಲ. ಇದು ಹೊಸಕೋಟೆ ಸಂಸ್ಕೃತಿ. ಇಂತಹ ಕೀಳು ಮಟ್ಟದ ಸಂಸ್ಕೃತಿ ನಮ್ಮದಲ್ಲ’ ಎಂದು ವಾಗ್ದಾಳಿ ನಡೆಸಿದರು.

ಪಟ್ಟಣದ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಲೂರಿನಲ್ಲಿ ಎಲ್ಲರೂ ಶಾಂತಿಯುತ ಜೀವನ ನಡೆಸುತ್ತಿದ್ದಾರೆ. ನಿಮ್ಮ ಸಂಸ್ಕೃತಿ ಏನೆಂದು ತಾಲ್ಲೂಕಿನ ಜನತೆಗೆ ಈಗಾಗಲೇ ಗೊತ್ತಾಗಿದೆ. ತಾಲ್ಲೂಕಿನ ಯುವಕರನ್ನು ದಂಗೆ ಏಳುವಂತೆ ಪ್ರಚೋದನೆ ನೀಡುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

‘2023ರ ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳ ಮರು ಎಣಿಕೆ ನಡೆದರೂ ಗೆಲ್ಲುವುದು ಮಾತ್ರ ನಾನೇ’ ಎಂದು ನಂಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

‘ಸಾರ್ವಜನಿಕ ಜೀವನದಲ್ಲಿ ವೈಯಕ್ತಿಕ ತೇಜೋವಧೆ, ತಂದೆ, ತಾಯಿ ಮತ್ತು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವುದು ಯಾರಿಗೂ ಶೋಭೆ ತರದು. ಯಾರೇ ಆಗಲಿ ರಾಜಕೀಯವಾಗಿ ಎದುರಿಸಬೇಕು. ವೈಯಕ್ತಿಕ ಟೀಕೆ, ಟಿಪ್ಪಣಿ ಸರಿಯಲ್ಲ. ಅವರ ನಾಲಿಗೆ ಅವರ ಕೀಳು ಸಂಸ್ಕೃತಿ ತೋರಿಸುತ್ತದೆ. ಅವರಷ್ಟು ಕೀಳು ಮಟ್ಟಕ್ಕೆ ಇಳಿಯುವುದು ನನ್ನಿಂದ ಸಾಧ್ಯವಿಲ್ಲ’ ಎಂದರು.

ಮಾಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಕಿಟ್ಟಿ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮುಮೂರ್ತಿ, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ ಲಕ್ಷ್ಮಿನಾರಾಯಣ,ವಿಜಯನರಸಿಂಹ, ಅಂಜನಿ ಸೋಮಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಾಳಿಗಾನಹಳ್ಳಿ ಶ್ರೀನಿವಾಸ್, ಕ್ಷೇತ್ರನಹಳ್ಳಿ ವೆಂಕಟೇಶ್ ಗೌಡ, ಆನೆಪುರ ಹನುಮಂತಪ್ಪ, ಚನ್ನರಾಯಪ್ಪ, ಸುನಿಲ್ ನಂಜೇಗೌಡ, ಫ್ರೆಂಡ್ಸ್ ಸಂತೋಷ್, ಮಾಸ್ತಿ ಚೇತನ್, ಪಿ.ನಾರಾಯಣಸ್ವಾಮಿ, ಎಕೆ ವೆಂಕಟೇಶ್, ನವೀನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.