ಮಾಲೂರು: ಎಲ್ಲಿ ನೋಡಿದರೂ ಕಸ. ಕುಡಿವ ನೀರಿಲ್ಲ. ಶೌಚಕ್ಕೆ ಶೌಚಾಲಯವಿಲ್ಲ. ಕಾಲಿಟ್ಟರೆ ಕೆಸರು...
ಇದು ಪಟ್ಟಣದ ಹನುಮಂತ ನಗರದಲ್ಲಿನ ಮಾಲೂರು-ಕೋಲಾರ ರಸ್ತೆಯ ಬಳಿ ಇರುವ ಸಂತೆ ಮೈದಾನದ ದುಸ್ಥಿತಿ.
ಒಂದೂವರೆ ಎಕರೆ ವಿಸ್ತೀರ್ಣದಲ್ಲಿರುವ ಸಂತೆ ಮೈದಾನದಲ್ಲಿ ನೂರಾರು ವರ್ಷಗಳಿಂದ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತಿದೆ. ಆದರೆ ಮೂಲ ಸೌಕರ್ಯ ಮಾತ್ರ ಮರೀಚಿಕೆಯಾಗಿದೆ. ಇದರಿಂದ ರೈತರು, ವರ್ತಕರು ಹಾಗೂ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ಸಂತೆ ಮೈದಾನ ಅಭಿವೃದ್ಧಿಪಡಿಸುತ್ತೇವೆಂಬ ಜನಪ್ರತಿನಿಧಿಗಳ ಭರವಸೆ ಭರವಸೆಗಳಾಗಿಯೇ ಉಳಿದಿದೆ. ಆದರೆ ದುರಸ್ತಿಯಾಗಿಲ್ಲ. ಮಧ್ಯವರ್ತಿಗಳ ಹಾವಳಿ ಇಲ್ಲದೆ ತಾಜಾ ತರಕಾರಿ, ಸೊಪ್ಪು ಮುಂಜಾನೆ 4 ರಿಂದ ಬೆಳಗ್ಗೆ 8ರವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ ಶೌಚಾಲಯವಿಲ್ಲ. ಸಂತೆ ಮೈದಾನ ಮಳೆ ಬಂದರೆ ಕಾಲಿಡಲು ಅಗದಂತೆ ಕೆಸರಾಗುತ್ತದೆ. ವರ್ತಕರು ಆ ಕೆಸರಲ್ಲೇ ವ್ಯಾಪಾರ ನಡೆಸಬೇಕಾದ ಅನಿವಾರ್ಯತೆ. ಸಂತೆಯಲ್ಲಿ 50 ತಿಂದ 70ಕ್ಕೂ ಅಧಿಕ ಅಂಗಡಿಗಳಿವೆ. ಇಲ್ಲಿ ಮಹಿಳಾ ವರ್ತಕರು ವ್ಯಾಪಾರ ನಡೆಸುತ್ತಿದ್ದು, ಶೌಚಕ್ಕೆ ಪರದಾಡುತ್ತಾರೆ. ನಗರಸಭೆಯಿಂದ ಕರ ವಸೂಲಿ ಮಾಡುತ್ತಾರೆ. ಆದರೆ, ಮೂಲ ಸೌಕರ್ಯ ಕಲ್ಪಿಸಿಲ್ಲ ಎಂಬುದು ವರ್ತಕರ ಆರೋಪ.
ಸಂತೆಯಲ್ಲಿ ಸ್ವಚ್ಛತೆ ಇಲ್ಲದೆ ಕೊಳಚೆ ನೀರು ಹರಿಯುವುದರಿಂದ ಮಾಲೂರು-ಕೋಲಾರ ಮುಖ್ಯ ರಸ್ತೆ ಬದಿಯಲ್ಲಿ ವರ್ತಕರು ತರಕಾರಿ, ಸೊಪ್ಪನ್ನು ಮಾರಾಟ ಮಾಡುತ್ತಾರೆ. ಗ್ರಾಹಕರು ಖರೀದಿಗೆ ನಿಂತಾಗ ರಸ್ತೆಯಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗಿ ವಾಹನ ದಟ್ಟಣೆ ಉಂಟಾಗುತ್ತದೆ. ಹಾಗಾಗಿ ಸಂತೆ ಮೈದಾನ ಸ್ವಚ್ಛಗೊಳಿಸಿ, ಸೌಕರ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂಬುದು ವರ್ತಕರ ಮಾತಾಗಿದೆ.
ಪುರಸಭೆ ವತಿಯಿಂದ ಪತ್ರಿ ದಿನ ಸ್ವಚ್ಛತಾ ಕಾರ್ಯ ನಡೆಯುತ್ತದೆ. ಸಂತೆಗೆ ಬರುವ ರೈತರು ವರ್ತಕರು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಪುರಸಭೆ ವತಿಯಿಂದ ಶೀಘ್ರ ಶೌಚಾಲಯ ನಿರ್ಮಾಣ ಮಾಡಲಾಗುವುದು. ವರ್ತಕರು ಹಾಗೂ ಗ್ರಾಹಕರು ಸ್ವಚ್ಛತೆ ಕಾಪಾಡಬೇಕು.–ಪ್ರದೀಪ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ
ಪತ್ರಿ ದಿನ ₹60 ಕರ ವಸೂಲಿ ಮಾಡುತ್ತಾರೆ. ಆದರೆ ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಕರ ವಸೂಲಿಗಾರರನ್ನು ಕೇಳಿದರೆ ಪುರಸಭೆ ವತಿಯಿಂದ ಸ್ವಚ್ಛಗೊಳಿಸುತ್ತಾರೆಂಬ ಊಡಾಫೆ ಉತ್ತರ ನೀಡುತ್ತಾರೆ.–ರಾಜಮ್ಮ, ತರಕಾರಿ ವರ್ತಕಿ
ಸಂತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವುದರಿಂದ ರಸ್ತೆ ಬದಿ ವ್ಯಾಪಾರ ವಹಿವಾಟು ನಡೆಸಲು ನಮಗೆ ಕಷ್ಟವಾಗುತ್ತಿದೆ. ಜೊತೆಗೆ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ.–ವನಜಮ್ಮ, ವರ್ತಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.