ADVERTISEMENT

ಮಾಲೂರಿಗೆ ಮೆಟ್ರೊ ವಿಸ್ತರಿಸಲು ಪ್ರಯತ್ನ

ಬಿಹಾರ, ಗುಜರಾತಿನ ಅಧಿಕಾರಿಗಳು ಬಂದು ರಾಜ್ಯದಲ್ಲಿ ಮತದಾರರ ಪಟ್ಟಿ ತಯಾರಿಸಿದ್ದಾರೆಯೇ: ಸಂಸದ ತಿರುಗೇಟು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 17:37 IST
Last Updated 14 ಆಗಸ್ಟ್ 2025, 17:37 IST
ಎಂ.ಮಲ್ಲೇಶ್‌ ಬಾಬು
ಎಂ.ಮಲ್ಲೇಶ್‌ ಬಾಬು   

ಕೋಲಾರ: ‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಿದ್ದು ಕಾಂಗ್ರೆಸ್ ಸರ್ಕಾರ. ಮತದಾರರ ಪಟ್ಟಿ ಸಿದ್ಧಪಡಿಸಿದ್ದು ರಾಜ್ಯದ ಅಧಿಕಾರಿಗಳು ಅಲ್ಲವೇ? ಏನು ಬಿಹಾರ, ಗುಜರಾತಿನಿಂದ ಅಧಿಕಾರಿಗಳು ಬಂದು ಪಟ್ಟಿ ತಯಾರಿಸಿದ್ದರೇ?’ ಎಂದು ಸಂಸದ ಎಂ.ಮಲ್ಲೇಶ್ ಬಾಬು, ಮತಗಳ್ಳತನ ಆರೋಪ ಮಾಡುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಮುಖಂಡರಿಗೆ ತಿರುಗೇಟು ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಏನು ಸಮಸ್ಯೆ ಇರಲಿಲ್ಲವೇ? 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷ 17 ಸ್ಥಾನ ಗೆದ್ದ ಕಡೆ ಮಾತ್ರ ಸಮಸ್ಯೆ ಇದೆಯೇ? ಕಾಂಗ್ರೆಸ್‌ನವರ ನೀತಿಯೇ ಅರ್ಥವಾಗುವುದಿಲ್ಲ. ಚುನಾವಣಾ ಆಯೋಗ ಗುರುತಿನ ಚೀಟಿ ಸಿದ್ಧಪಡಿಸಿ ನೀಡುವಾಗ ಕೆಲವು ಕಡೆ ವ್ಯತ್ಯಾಸ ಆಗಿರುತ್ತದೆ. ರಾಜ್ಯದ ಅಧಿಕಾರಿಗಳೇ ಮತದಾರರ ಪಟ್ಟಿ ತಯಾರಿಸುತ್ತಾರೆ. ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ಹೇಳಿದ್ದು ಸರಿ ಇದೆ’ ಎಂದರು.

‘ಮಾಲೂರು ನಗರದವರೆಗೆ ಮೆಟ್ರೊ ಮಾರ್ಗ ವಿಸ್ತರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದ್ದೇನೆ. ಈ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಪ್ರಶ್ನೆ ಕೂಡ ಕೇಳಿದ್ದೇನೆ. ಸದ್ಯಕ್ಕೆ ಕಾರ್ಯಸಾಧುವಲ್ಲ ಎಂಬ ಉತ್ತರ ಬಂದಿದೆ. ಆದರೆ, ನಾನು ಇಲ್ಲಿಗೇ ನಿಲ್ಲಿಸುವುದಿಲ್ಲ. ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರುವ ಕೆಲಸ ಮಾಡುತ್ತಿದ್ದೇನೆ. ಮೆಟ್ರೊ ವಿಸ್ತರಿಸಿದರೆ ಸರ್ಕಾರಕ್ಕೆ ಆದಾಯವೂ ಬರಲಿದೆ, ಮಾಲೂರಿನ ಜನರಿಗೂ ಸಹಾಯವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಕೋಲಾರ–ಬೆಂಗಳೂರು ರೈಲು ಮಾರ್ಗದ ಯೋಜನೆ ಸಂಬಂಧ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್‌ ಆಶ್ವಾಸನೆ ನೀಡಿದ್ದಾರೆ’ ಎಂದು ಹೇಳಿದರು.

‘ಕೈಗಾರಿಕಾ ಪ್ರದೇಶ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉಡಾನ್ ಯೋಜನೆಯಡಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಯೋಜನೆ ಇದೆ. ಹೊಸ ವಿಮಾನ ನಿಲ್ದಾಣ ಮಾಡಲು ಎರಡೂವರೆ ಸಾವಿರ ಎಕರೆ ಜಮೀನು ಬೇಕಾಗುತ್ತದೆ. ಈಗಾಗಲೇ ಬೈರಾಪುರದಲ್ಲಿ ಡಿಆರ್‌ಡಿಒ ಉಪಯೋಗಿಸುತ್ತಿರುವ ಏರ್‌ ಸ್ಟ್ರಿಪ್‌ ಅನ್ನು ಸಾರ್ವಜನಿಕರಿಗೂ ಷರತ್ತುಗಳ ಅಡಿಯಲ್ಲಿ ಅವಕಾಶ ಕಲ್ಪಿಸಿಕೊಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಲಾಗಿದೆ. ಮುಂದಿನ ವರ್ಷ ಜನವರಿ ಅಥವಾ ಫೆಬ್ರುವರಿಯಲ್ಲಿ ವೇಮಗಲ್‌ನಲ್ಲಿ ಹೆಲಿಕಾಪ್ಟರ್‌ ಘಟಕ ನಿರ್ಮಾಣ ಶಂಕುಸ್ಥಾಪನೆಗೆ ಅವರನ್ನು ಆಹ್ವಾನಿಸಿದ್ದೇನೆ. ಬಂದರೆ ಡಿಆರ್‌ಡಿಒಗೆ ಕರೆದೊಯ್ದು ಏರ್‌ಸ್ಟ್ರಿಪ್‌ ತೋರಿಸುತ್ತೇನೆ’ ಎಂದರು.

‘ಜಿಲ್ಲೆಯಲ್ಲಿ ನಾಲ್ಕು ರೈಲ್ವೆ ಮೇಲ್ಸೇತುವೆ ಆಗಲೇಬೇಕು ಎಂದು ಮನವಿ ಮಾಡಿದ್ದೆ. ಇದರ ಜತೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಅಧಿಕಾರಿಗಳ ಮೇಲೆ ಒತ್ತಡ ತಂದ ಕಾರಣ ಟೆಂಡರ್ ಹಂತಕ್ಕೆ ಬಂದಿದೆ. ಇಲ್ಲದಿದ್ದರೆ ಕಡತವು ಹುಬ್ಬಳಿಗೆ ಹೋಗಿ ಬರುವಷ್ಟರಲ್ಲಿ ತಡವಾಗುತ್ತಿತ್ತು’ ಎಂದು ಹೇಳಿದರು.

‘ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್‌ ಶುಲ್ಕ ವಸೂಲಿ ಇನ್ನೂ ಆರಂಭವಾಗಿಲ್ಲ. ಈ ಸಂಬಂಧ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ. ಸಾರ್ವಜನಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಕ್ರಮ ವಹಿಸಲಾಗುವುದು’ ಎಂದರು.

‘ವೇಮಗಲ್–ಕುರುಗಲ್‌ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ಪರವಾಗಿ ಉತ್ತಮ ವಾತಾವರಣವಿದೆ. ಅಧಿಕಾರ ಹಿಡಿಯುತ್ತೇವೆ. ಕಾಂಗ್ರೆಸ್ ಬಗ್ಗೆ ಅಸಮಾಧಾನವಿದ್ದು, ಅವರನ್ನೆಲ್ಲಾ ನಮ್ಮತ್ತ ಸೆಳೆಯುವ ಕೆಲಸವನ್ನು ಮುಖಂಡರಾದ ಸಿಎಂಆರ್ ಶ್ರೀನಾಥ್, ವರ್ತೂರು ಪ್ರಕಾಶ್ ಮಾಡುತ್ತಿದ್ದಾರೆ. ಹೀಗಾಗಿ, ನಮಗೆ ಬಹುಮತ ದೊರೆಯುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೇಮಗಲ್–ಕುರುಗಲ್‌ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ವರು ನಾಲ್ಕೈದು ಸ್ಥಾನ ಗೆಲ್ಲುಬಹುದು. ಉಳಿದ ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಆಯ್ಕೆಯಾಗುವ ವಿಶ್ವಾಸವಿದೆ

ಎಂ.ಮಲ್ಲೇಶ್‌ ಬಾಬು ಸಂಸದ

ಬಿಜಿಎಂಎಲ್‌ ಜಾಗ ಒತ್ತುವರಿ ತಡೆಗೆ ಕ್ರಮ

‘ಬಿಜಿಎಂಎಲ್‌ ಪ್ರದೇಶದ ಒತ್ತುವರಿ ತಡೆಯಲು ಪ್ರಯತ್ನಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು ಫೆನ್ಸಿಂಗ್‌ ಮಾಡಲು ಸೂಚಿಸಿದ್ದೇನೆ. ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ ಬಂದ ಮೇಲೆ ಈ ಪ್ರದೇಶ ಉತ್ತಮ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣ ಕೂಡ ಹತ್ತಿರವಿದೆ. ಇಲ್ಲಿರುವ ಸುಮಾರು 12 ಸಾವಿರ ಎಕರೆ ಪೈಕಿ 5 ಸಾವಿರ ಎಕರೆ ಜಮೀನನ್ನು ಎಕರೆಗೆ ₹ 8 ಲಕ್ಷದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಡೆತನದ ಸಂಸ್ಥೆಗಳಿಗೆ ಮಾರಾಟ ಮಾಡಲು ಸಿದ್ಧವಿದ್ದಾರೆ. ಖಾಸಗಿಯವರಿಗೆ ಮಾರುವುದಿಲ್ಲ’ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ತಿಳಿಸಿದರು. ‘ಬಿಜಿಎಂಎಲ್‌ ಜಾಗವನ್ನು ಡ್ರೋಣ್‌ ಸರ್ವೇ ಕೂಡ ಮಾಡಲಾಗಿದೆ. ಸುಮಾರು ಐದು ಸಾವಿರ ಎಕರೆ ಜಾಗ ಚಿನ್ನದ ಗಣಿ 18 ವಾರ್ಡ್‌ಗಳು ರೈಲ್ವೆ ಟ್ರ್ಯಾಕ್‌ ಹಾಗೂ ಇನ್ನಿತರ ಸೌಲಭ್ಯಗಳಿಗೆ ಹೋಗಿದೆ. ಇನ್ನೂ ಆರು ಸಾವಿರ ಎಕರೆ ಬಿಜಿಎಂಎಲ್‌ ವಶದಲ್ಲಿದೆ’ ಎಂದರು. ‘ಬಿಜಿಎಂಎಲ್‌ಗೆ ಸಂಬಂಧಿಸಿದಂತೆ ಮನೆಗಳ ಸ್ವಾಧೀನಪತ್ರದ ಖಾತೆ ಮಾಡಿಕೊಡಬೇಕಿದೆ. ಸುಮಾರು 1300 ಮಂದಿಗೆ ಕೊಡಬೇಕಿದೆ. ಕೆಜಿಎಫ್‌ಗೆ ಸಚಿವರನ್ನೇ ಕರೆಸಿ ಅಲ್ಲಿಯೇ ಸ್ವಾಧೀನ ಪತ್ರ ಕೊಡಿಸಲಾಗುವುದು. ಖಾತೆ ವರ್ಗಾಯಿಸಲು ನಗರಸಭೆಗೆ ಪತ್ರ ಬರೆಯುವುದಾಗಿ ಇಲಾಖೆಯ ಕಾರ್ಯದರ್ಶಿ ತಿಳಿಸಿದ್ದಾರೆ’ ಎಂದು ಹೇಳಿದರು.

ಎರಡು ಹೊಸ ಲೋಹ ಪತ್ತೆ

‘ಚಿನ್ನದ ಗಣಿಗೆ ಸಂಬಂಧಿಸಿದಂತೆ ಮತ್ತೆ ಟೆಂಡರ್‌ ನೀಡಲು ಸರ್ವೆ ನಡೆಸಲಾಗುತ್ತಿದೆ. ಹೊಸ ಎರಡು ಲೋಹವಿರುವುದು ಪತ್ತೆಯಾಗಿದೆ. ಹಾಗೆಯೇ ಒಂದು ಟನ್‌ ಮಣ್ಣು ತೆಗೆದರೆ 2 ಗ್ರಾಂ ಬಂಗಾರ ಸಿಗುವ ಸಾಧ್ಯತೆ ಇದೆ ಎಂಬುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಈಗ ಬಂಗಾರದ ದರವೂ ಏರಿಕೆ ಆಗಿದೆ’ ಎಂದು ಮಲ್ಲೇಶ್‌ ಬಾಬು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.