ADVERTISEMENT

ಜನರ ದಾರಿ ತಪ್ಪಿಸುತ್ತಿರುವ ಎದುರಾಳಿ: ಸುನಿಲ್‌ ನಂಜೇಗೌಡ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 6:02 IST
Last Updated 11 ನವೆಂಬರ್ 2025, 6:02 IST
ಕೋಲಾರದಲ್ಲಿ ಸೋಮವಾರ ಶಾಸಕ ಕೆ.ವೈ.ನಂಜೇಗೌಡರ ಪುತ್ರ ಸುನಿಲ್‌ ನಂಜೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು
ಕೋಲಾರದಲ್ಲಿ ಸೋಮವಾರ ಶಾಸಕ ಕೆ.ವೈ.ನಂಜೇಗೌಡರ ಪುತ್ರ ಸುನಿಲ್‌ ನಂಜೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು    

ಕೋಲಾರ: ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ಎರಡೂವರೆ ವರ್ಷಗಳಿಂದ ಮಾಲೂರು ಕ್ಷೇತ್ರದ ಜನರ ದಾರಿತಪ್ಪಿಸಿ ಗೊಂದಲ ಉಂಟು ಮಾಡುತ್ತಿದ್ದಾರೆ. ಇದೇ ಉದ್ದೇಶಕ್ಕೆ ಅವರು ಪದೇಪದೇ ಮಾಲೂರಿಗೆ ಬರುತ್ತಿರುತ್ತಾರೆ ಎಂದು ಶಾಸಕ ಕೆ.ವೈ.ನಂಜೇಗೌಡರ ಪುತ್ರ ಸುನಿಲ್‌ ನಂಜೇಗೌಡ ವಾಗ್ದಾಳಿ ನಡೆಸಿದರು.

ಜಿಲ್ಲಾಡಳಿತ ಭವನದ ಭದ್ರತಾ ಕೊಠಡಿ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮರು ಮತ ಎಣಿಕೆವರೆಗೆ ಅವರು ಸುಮ್ಮನಿದ್ದು ಬಿಡಲಿ. ಬಳಿಕ ಸತ್ಯ ಏನೆಂಬುದು ಗೊತ್ತಾಗಲಿದೆ. ಅದಕ್ಕೂ ಮೊದಲು ಗೊಂದಲ ಸೃಷ್ಟಿಸುವುದು ಬೇಡ’ ಎಂದರು.

ಮರು ಮತ ಎಣಿಕೆ ಮೇಲೆ ನಿಗಾ ಇಡಲು ಕೇಂದ್ರದಿಂದಲೂ ಅಧಿಕಾರಿ ಬಂದಿದ್ದಾರೆ. ರಾಜ್ಯದ ಅಧಿಕಾರಿಗಳು ಇರಲಿದ್ದಾರೆ. ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಇರುತ್ತಾರೆ ಎಂದು ಹೇಳಿದರು.

ADVERTISEMENT

ಜಿಲ್ಲಾಡಳಿತ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಡೆಸುತ್ತಿದೆ. ಯಾವುದೇ ಲೋಪವಿಲ್ಲ, ಕಡತಗಳು ಹೇಗಿದ್ದವೋ ಹಾಗೆಯೇ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.

ಬ್ಯಾಲೆಟ್ ಬಾಕ್ಸ್, ಇವಿಎಂ, ಕಂಟ್ರೋಲ್ ಯೂನಿಟ್ ಹಾಗೂ ವಿವಿ ಪ್ಯಾಟ್ ಎಲ್ಲವೂ ಸರಿಯಾಗಿ ಇದ್ದೆಯೇ ಎಂಬುದನ್ನು ಮೊದಲಿಗೆ ಪರಿಶೀಲನೆ ನಡೆಸಿ ಎಲ್ಲಾ ಪೆಟ್ಟಿಗೆಗಳಿಗೂ ಸೀಲ್ ಹಾಕಿ ಜಿಪಿಎಸ್ ಇರುವ ವಾಹನದಲ್ಲಿ ಸಾಗಿಸಲಾಗುತ್ತದೆ ಎಂದು ಹೇಳಿದರು.

‘ನಾವು ಪರಿಶೀಲಿಸಿದ್ದು, ಸೀಲ್‌ಗಳನ್ನು ತೆಗೆಯಲಾಗಿಲ್ಲ. ಟ್ರಂಕ್‌ನಲ್ಲಿ ಇವುಗಳನ್ನು ಇಟ್ಟಿದ್ದಾಗ ಪ್ರೆಸ್‌ ಆಗಿರುವ ಕಾರಣ ಕೆಲವು ಸೀಲ್‌ಗಳು ತೆರೆದುಕೊಂಡಿದೆ’ ಎಂದರು.

ಮರು ಮತ ಎಣಿಕೆಗೆ ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಚುನಾವಣಾಧಿಕಾರಿ ನೀಡುವ ಪ್ರಕ್ರಿಯೆಗೆ ಅನುಗುಣವಾಗಿ ನಾವು ನಡೆದುಕೊಳ್ಳುತ್ತೇವೆ. ಮುಂದೇನಾಗುತ್ತದೆಯೋ ನೋಡೋಣ. ನಮ್ಮ ಪಕ್ಷದ ಎಲ್ಲಾ ಏಜೆಂಟ್‌ಗಳಿಗೆ ಈಗಾಗಲೇ ಪಾಸ್‌ ವಿತರಿಸಲಾಗಿದೆ. ನಮಗೆ ಗೆಲುವಿನ ವಿಶ್ವಾಸವಿದೆ. ಆದರೆ, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.