ADVERTISEMENT

ಮಾಲೂರು: ಶಾಲಾ ಬಸ್‌ ಉರುಳಿ 17 ಮಕ್ಕಳಿಗೆ ಗಾಯ

ತಲೆಗೆ ಪೆಟ್ಟು ಬಿದ್ದಿರುವ ಐವರು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:55 IST
Last Updated 14 ಜನವರಿ 2026, 7:55 IST
ಮಾಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಕ್ಕಳು
ಮಾಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಕ್ಕಳು   

ಮಾಲೂರು: ತಾಲ್ಲೂಕಿನ ಅರುಣಿಘಟ್ಟ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಖಾಸಗಿ ಶಾಲಾ ಬಸ್ ಮಗುಚಿ ಬಿದ್ದು 17 ಮಕ್ಕಳಿಗೆ ಗಾಯಗಳಾಗಿವೆ. ಈ ಪೈಕಿ ಐವರು ಮಕ್ಕಳ ತಲೆಗೆ ಪೆಟ್ಟು ಬಿದ್ದಿದೆ.

ಕುಡಿಯನೂರು ಗ್ರಾಮದ ಸಮೀಪದ ಬೋಸ್ ವಿದ್ಯಾ ಸಂಸ್ಥೆಗೆ ಮಾಸ್ತಿಯಿಂದ ಮಕ್ಕಳನ್ನು ‌ಕರೆತರುತ್ತಿದ್ದ ವಾಹನ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಬದಿಗೆ ಉರುಳಿದೆ. ವಾಹನದಲ್ಲಿ ಸುಮಾರು 25 ಮಕ್ಕಳು ಇದ್ದರು.

ತಲೆಗೆ ಪೆಟ್ಟುಬಿದ್ದು ಗಾಯಗೊಂಡಿರುವ ಅರ್ಮಾನ್, ಜೀವಿತ, ಸುದರ್ಶನ್, ಸಾಯಿ ಹಾಗೂ ಗಗನ್ ಎಂಬ ಮಕ್ಕಳನ್ನು ಸ್ಥಳೀಯರ ನೆರವಿನಿಂದ ಮಾಲೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕೋಲಾರದ ಜಿಲ್ಲಾ ಆಸ್ಪತ್ರೆ ಕಳಿಸಲಾಯಿತು.

ADVERTISEMENT

ಬಸ್‌ ಹಿಂದೆ ವಾಹನದಲ್ಲಿ ಬರುತ್ತಿದ್ದ ಸುರೇಂದ್ರ ರೆಡ್ಡಿ ಎಂಬುವರು ನಾಲ್ಕೈದು ಮಕ್ಕಳನ್ನು ತಮ್ಮ ವಾಹನದಲ್ಲಿ ಕರೆದೊಯ್ದು ಮಾಲೂರು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಮಕ್ಕಳಿಗೆ ಸಕಾಲಕ್ಕೆ ಚಿಕಿತ್ಸೆ ದೊರಕಲು ಅನುಕೂಲವಾಯಿತು ಎಂದು ಪೋಷಕರು ಹೇಳಿದರು.

ಸರ್ಕಾರಿ ಆಸ್ಪತ್ರೆಯ ಡಾ.ಶ್ರೀನಿವಾಸ್, ಡಾ.ಮಂಜುನಾಥ್, ಡಾ.ಸಂಗೀತಾ ಮಕ್ಕಳಿಗೆ ಚಿಕಿತ್ಸೆ ನೀಡಿದರು. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್‌ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಪೋಷಕರು ಭಯಪಡಬೇಕಾಗಿಲ್ಲ. ಸಣ್ಣಪುಟ್ಟ ಗಾಯವಾಗಿದ್ದು, ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.

ಶಾಲೆಯ ಮಾಲೀಕ ಹಾಗೂ ಬಸ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮಾಲೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶಾಲೆಯ ಮುಖ್ಯಸ್ಥರು ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅಪಘಾತಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಲಾಗುವುದು. ಮಕ್ಕಳು ಸುರಕ್ಷಿತವಾಗಿದ್ದು ಪೋಷಕರು ಭಯಪಡಬೇಕಾಗಿಲ್ಲ
– ಕನ್ನಿಕಾ ಸಿಕ್ರಿವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.