ADVERTISEMENT

ನಗರಸಭೆಯಾಗಿ ಮಾಲೂರು: ಗರಿಗೆದರಿದ ಕನಸು

ಕಸ ವಿಲೇವಾರಿ, ಒಳ ಚರಂಡಿ ಸಮಸ್ಯೆ, ಮೂಲಸೌಕರ್ಯ ಕೊರತೆ ನಿವಾರಣೆಯ ಆಶಾಭಾವ

ವಿ.ರಾಜಗೋಪಾಲ್
Published 26 ಮೇ 2025, 6:59 IST
Last Updated 26 ಮೇ 2025, 6:59 IST
ಮಾಲೂರು ಪುರಸಭೆ ಕಚೇರಿ
ಮಾಲೂರು ಪುರಸಭೆ ಕಚೇರಿ   

ಮಾಲೂರು: ಮಾಲೂರು ಪುರಸಭೆಯನ್ನು ಮೇಲ್ದರ್ಜೆಗೇರಿಸಬೇಕೆಂಬ ದಶಕಗಳ ಬೇಡಿಕೆ ಈಡೇರಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ನಿರ್ಣಯವನ್ನು ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದೆ. ಇದರಿಂದಾಗಿ ಹಲವು ವರ್ಷಗಳಿಂದ ಪಟ್ಟಣದ ಮೂಲಸೌಕರ್ಯ ಸೇರಿ ಹಲವು ಸಮಸ್ಯೆಗಳಿಗೆ ಮುಕ್ತ ಸಿಗುವ ಆಶಾಭಾವನೆ ಜನರಲ್ಲಿ ಮೂಡಿದೆ.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನ ಸಾಂದ್ರತೆ ಏರಿಕೆಯಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಕಲ್ಪಸುವಲ್ಲಿ ಇಲ್ಲಿನ ಪುರಸಭೆ ವಿಫಲವಾಗಿದೆ. ರಸ್ತೆ, ಕಸ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆ ಹಾಲಾಗಿದ್ದು, ಜನರು ಕೊರತೆಗಳ ನಡುವೆ ಬದುಕು ನಡೆಸುತ್ತಿದ್ದಾರೆ. ಮಾಲೂರು ನಗರಸಭೆಯಾದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರಲಿದ್ದು, ಮೂಲ ಸೌಕರ್ಯಗಳು ಅಭಿವೃದ್ಧಿ ಜತೆಗೆ ಸಮಸ್ಯೆಗಳು ನಿವಾರಣೆ ಯಾಗಲಿದೆ ಎಂಬ ಭಾವನೆ ಪಟ್ಟಣದ ನಾಗರಿಕರಲ್ಲಿ ಮೂಡಿದೆ.

ಪಟ್ಟಣದಲ್ಲಿ 27 ವಾರ್ಡ್‌ಗಳಿದೆ. 2011ರ ಜನಗಣತಿ ಪ್ರಕಾರ 40,050 ಜನಸಂಖ್ಯೆ ಇದ್ದು, ಬಹುತೇಕ ಶೇ 90 ರಷ್ಟು ಕೃಷಿಯೇತರ ಚಟುವಟಿಕೆಗಳ ಮೇಲೆ ಪಟ್ಟಣ ಆರ್ಥಿಕ ವಹಿವಾಟು ಅವಲಂಬಿತವಾಗಿದೆ. 

ADVERTISEMENT

ಕಸ ವಿಲೇವಾರಿ ಸಮಸ್ಯೆ: ಪಟ್ಟಣದ 27 ವಾರ್ಡ್‌ಗಳಲ್ಲಿಯೂ ಸೂಕ್ತವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ರಸ್ತೆ ಬದಿ ಮತ್ತು ಪ್ರಮುಖ ವೃತ್ತಗಳಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಸರಿಯಾದ ಸಮಯಕ್ಕೆ ವಿಲೇವಾರಿಯಾಗದೆ ದುರ್ನಾತ ಬಿರುತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಅಸಹ್ಯ ಹುಟ್ಟಿಸುತ್ತದೆ.

ಜೆಎಂಎಫ್‌ಸಿ ನ್ಯಾಯಾಲಯದ ಹಿಂಭಾಗದ ರಸ್ತೆ, ಪಟಾಲಮ್ಮ ದೇವಾಲಯ ಬಳಿ, ಹಳೆ ಎಪಿಎಂಸಿ ರಸ್ತೆ, ಮಾರುತಿ ಬಡಾವಣೆ ರೈಲ್ವೆ ಫಿಡರ್‌ ರಸ್ತೆ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾರ್ವಜನಿಕರು, ಮಳಿಗೆ ಮತ್ತು ಹೋಟೆಲ್‌ ಮಾಲೀಕರು ಕಸ ಸುರಿಯುತ್ತಿದ್ದಾರೆ. ಪುರಸಭೆ ಸಿಬ್ಬಂದಿ ಕೊರತೆ ಹಾಗೂ ಕಸ ಸಂಗ್ರಹ ವಾಹನಗಳ ಕೊರತೆಯಿಂದ ಕಸ ವಿಲೇವಾರಿಯಾಗದೆ ಎಲ್ಲೆಲ್ಲೂ ಗಲೀಜು ತಾಂಡವವಾಡುತ್ತಿದೆ.

ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರುವುದರಿಂದ ಪೌರ ಕಾರ್ಮಿಕರ ಸಂಖ್ಯೆ ಏರಿಕೆಯಾಗುವ ಜತೆಗೆ, ಕಸ ಸಂಗ್ರಹ ಮತ್ತು ವಿಲೇವಾರಿ ವಾಹನಗಳ ಖರೀದಿಗೆ ಹೆಚ್ಚಿನ ಅನುದಾನ ಸಿಗಲಿದೆ. ಇದರಿಂದ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬಹುದು. ಕಸ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ.

ಒಳಚರಂಡಿ ವ್ಯವಸ್ಥೆ: ಪಟ್ಟಣದಲ್ಲಿ 2009ರಲ್ಲಿ ಸುಮಾರು ₹21 ಕೊಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಒಳ ಚರಂಡಿ ಕೊಳಚೆ ರಸ್ತೆಗಳಲ್ಲಿ ಹರಿಯುತ್ತಿದ್ದು, ಹೇಸಿಗೆ ಹುಟ್ಟಿಸಿದೆ. ಇನ್ನೂ ಕೆರೆಯ ಬಳಿ ನಿರ್ಮಾಣವಾಗಿದ್ದ ತ್ಯಾಜ್ಯ ನೀರು ಸಂಸ್ಕರಣ ಘಟಕ ಸ್ಥಗಿತಗೊಂಡು ಹಲವು ತಿಂಗಳುಗಳೇ ಕಳೆದಿವೆ. ಇದರಿಂದ ಕೊಳಚೆ ನೀರು ಕೆರೆ ಸೇರಿ ಕಲುಷಿತವಾಗುತ್ತಿದೆ. ಒಳ ಚರಂಡಿ ವ್ಯವಸ್ಥೆ ಸರಿಪಡಿಸಬೇಕು, ಕೆರೆಗೆ ಕೊಳಚೆ ಸೇರದಂತೆ ಕ್ರಮ ಕೈಗೊಳ್ಳಬೇಕೆಂದು ಪುರಸಭೆಗೆ ಮನವಿ ಕೊಟ್ಟರೂ ಯಾವ ಪ್ರಯೋಜನವು ಆಗಿಲ್ಲ. ನಗರಸಭೆಯಾದ ಬಳಿಕ ನಮ್ಮ ಮನವಿಗೆ ಸ್ಪಂದನೆ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕು ಎನ್ನುತ್ತಾರೆ ಸ್ಥಳೀಯರು.

ಮಾಲೂರು ಪಟ್ಟಣದ ಮಾಹಿತಿ

2011ರ ಜನಗಣತಿ ಪ್ರಕಾರ ಜನಸಂಖ್ಯೆ: 40,050

ಜನಸಾಂದ್ರತೆ ಪ್ರತಿ ಕಿ.ಮೀ. ಗೆ: 5,625

ವಿಸ್ತೀರ್ಣ: 1.12 ಚದರ ಕಿ.ಮೀ 

ಮಾಲೂರಿನ ಕೊಳಚೆ ನೀರು ಸಂಸ್ಕರಣ ಘಟಕ ಸ್ಥಗಿತಗೊಂಡಿದೆ
ಮಾಲೂರು ಪಟ್ಟಣದ ರಸ್ತೆಗಳಲ್ಲಿ ಕಸ
ನಗರಸಭೆಯಲ್ಲಿ ಪೌರಕಾರ್ಮಿಕರ ಸಂಖ್ಯೆ ಏರಿಕೆಯಾಗಲಿದೆ. ಇದರಿಂದ ಪಟ್ಟಣದ ಸ್ವಚ್ಛತೆ ಕಾಪಾಡಲು ಅನುಕೂಲವಾಗುತ್ತದೆ. ಜೊತೆಗೆ ಅನುದಾನ ಹೆಚ್ಚಾಗಿ ಬರಲಿದೆ. ಇದರಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ಹೆಚ್ಚಾಗಲಿದೆ.
ಎಂವಿ.ಹನುಮಂತಯ್ಯ ಕಸಾಪ ತಾಲೂಕು ಅಧ್ಯಕ್ಷ
ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಇದ್ದಾರೆ. ಡಿ.ಲಿಮಿಟೇಶನ್ ಮಾಡುವುದರಿಂದ ವಾರ್ಡ್‌ಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ಹೆಚ್ಚಾಗಿ ನಡೆಯುತ್ತವೆ. ಇದರಿಂದ ನಾಗರಿಕರಿಗೆ ಅನುಕೂಲವಾಗುತ್ತದೆ.
ವಿ. ಶ್ರೀನಿವಾಸ್ ಹಿರಿಯ ಕಲಾವಿದ
ರಾಜ ಕಾಲುವೆಗಳಲ್ಲಿ ನಿರ್ಮಾಣ ಮಾಡಿರುವ ಒಳ ಚರಂಡಿ ಪೈಪ್‌ಗಳನ್ನು ಸ್ಥಳಾಂತರಿಸಬೇಕು. ಕೆರೆಯ ಬಳಿ ಇರುವ ಒಳಚರಂಡಿ ನೀರು ಸಂಸ್ಕರಣ ಘಟಕ ಸ್ಥಗಿತಗೊಂಡು ವರ್ಷಗಳು ಕಳೆದಿದೆ. ಈ ಸಮಸ್ಯೆಗಳಿಗೆ ಮುಕ್ತಿ ನೀಡಿ
ಅಲೂ ರಮೇಶ್ ಸ್ಥಳೀಯ ನಿವಾಸಿ

ಏನೇನು ಪ್ರಯೋಜನೆ ?

ವಾರ್ಡ್‌ ಸಂಖ್ಯೆ ಏರಿಕ ಮಾಲೂರು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 27 ಸದಸ್ಯರು ಇದ್ದಾರೆ. ಪ್ರಸ್ತುತ ಆಡಳಿತ ಮಂಡಳಿಯ ಅಧಿಕಾರವಧಿ ಡಿಸೆಂಬರ್‌ ವರೆಗೆ ಇದೆ. ಹಾಲಿ ಸದಸ್ಯರು ಅವಧಿ ರ್ಪೂಣಗೊಳ್ಳುವವರೆಗೂ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ. ಮುಂದಿನ ದಿನಗಳಲ್ಲಿ ನಗರಸಭೆಯಾಗುವುದರಿದ ವಾರ್ಡ್‌ ಸಂಖ್ಯೆ ಮತ್ತು ಸದಸ್ಯರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ವಾರ್ಡ್ ಮರುವಿಂಗಡಣೆ ವಾರ್ಡ್‌ವಾರು ಮೀಸಲಾತಿ ಕರ್ನಾಟಕ ನಗರಸಭೆ ಅಧಿನಿಯಮ ಪ್ರಕಾರ ನಿಗದಿಯಾಗಲಿದೆ. ಹುದ್ದೆಗಳ ಏರಿಕೆ ಮಾಲೂರು ಪಟ್ಟಣದ ಪುರಸಭೆಯಲ್ಲಿ ಅಧಿಕಾರಿಗಳು ಸೇರಿದಂತೆ ಒಟ್ಟು ಪೌರ ಕಾರ್ಮಿಕರು 91 ಮಂದಿ ಇದ್ದಾರೆ. ನಗರಸಭೆಯಾದ ಬಳಿಕ 240 ಕಾಯಂ ಹುದ್ದೆಗಳು ಮುಂಜೂರಾಗುವ ಸಾಧ್ಯತೆ ಇದೆ. ಪ್ರಸ್ತುತ ಪುರಸಭೆಯಲ್ಲಿ ಒಬ್ಬರು ಮಾತ್ರ ಎಂಜನಿಯರ್‌  ಇದ್ದಾರೆ. ನಗರಸಭೆಯಲ್ಲಿ ಎಇ ಮತ್ತು ಎಇಇ ಸ್ಥಾನಗಳು ಇರುತ್ತಾವೆ. ಇದರಿಂದ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅದೇ ರೀತಿ ಪುರಸಭೆಯಲ್ಲಿ ಆರೋಗ್ಯ ಅಧಿಕಾರಿಗಳು ಇಬ್ಬರು ಮಾತ್ರ ಇದ್ದಾರೆ. ನಗರಸಭೆ ನಂತರ ಆರು ಅಧಿಕಾರಿಗಳು ನೇಮಕವಾಗವುದರಿಂದ ಪಟ್ಟಣದ ಸ್ವಚ್ಚತೆಕಾರ್ಯ ಸುಗಮವಾಗಲಿದೆ. ಅನುದಾನ ಹೆಚ್ಚಳ: ಆಧುನಿಕ ಸೌಕರ್ಯ ನಗರಸಭೆಯಾಗಿ ರೂಪುಗೊಂಡರೆ ಮಾಲೂರಿಗೆ ಹೆಚ್ಚಿನ ಅನುದಾನ ಹರಿದು ಬರಲಿದೆ. ಜನಸಂಖ್ಯೆ ಮತ್ತು ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ಎಸ್‌ಎಫ್‌ಸಿ ಅನುದಾನ 15ನೇ ಹಣಕಾಸು ಆಯೋಗದ ಅನುದಾನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತರೆ ಅನುದಾನ ಸೇರಿದಂತೆ ಶೇ 30 ರಷ್ಟು ಅನುದಾನ ಬರಲಿದೆ. ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳ ತಲಾದಾಯ ಉದ್ಯೋಗವಕಾಶ ಹೆಚ್ಚಾಗಲಿದೆ. ಒಳಚರಂಡಿ ಬೀದಿದೀಪ ಕುಡಿಯುವ ನೀರು ಆಧುನಿಕ ಸೌಕರ್ಯಗಳು ವಾರ್ಡ್‌ನ ನಾಗರಿಕರಿಗೆ ದೊರೆಯಲಿದೆ.

80 ಲಕ್ಷಕ್ಕೆ ಏರಿದ ಜನಸಂಖ್ಯೆ

ಮಾಲೂರು ಬೆಂಗಳೂರಿಗೆ ಸಮೀಪ ಇರುವುದರಿಂದ ಹಾಗೂ ಕೈಗಾರಿಕಾ ಪ್ರದೇಶಗಳು ಹೆಚ್ಚು ಇರುವುದರಿಂದ ಜನಸಂಖ್ಯೆ ಸುಮಾರು 80 ಲಕ್ಷ ಮೀರಿದೆ. ಪಟ್ಟಣದಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ನಗರಸಭೆ ಘೋಷಣೆ ಮಾಡಲಾಗಿದೆ. ಇದರಿಂದ ಅಕ್ಕ ಪಕ್ಕದ ಯಾವುದೇ ಗ್ರಾಮಗಳನ್ನು ಒಳಪಡಿಸಿಕೊಂಡಿಲ್ಲ. ಇದರಿಂದ ಪಟ್ಟಣದ ಜತೆಗೆ ಹೆಚ್ಚಿನ ರೀತಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಪ್ರದೀಪ್ ಕುಮಾರ್‌ ಮುಖ್ಯಾಧಿಕಾರಿ ಪುರಸಭೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.