ADVERTISEMENT

ಮಾಲೂರು: ಚುನಾವಣೆ ಮುಂದೂಡಲು ‘ಅಪಹರಣ’ ಅಸ್ತ್ರ

ಮಾಲೂರು ಪುರಸಭೆ: ತೆರೆಮರೆಯಲ್ಲೇ ತಂತ್ರ ಎಣೆದ ಕಮಲ ಪಡೆ

ಜೆ.ಆರ್.ಗಿರೀಶ್
Published 7 ನವೆಂಬರ್ 2020, 15:53 IST
Last Updated 7 ನವೆಂಬರ್ 2020, 15:53 IST
ಮಾಲೂರು ಪುರಸಭೆಯ ಹೊರ ನೋಟ.
ಮಾಲೂರು ಪುರಸಭೆಯ ಹೊರ ನೋಟ.   

ಕೋಲಾರ: ಕಾಂಗ್ರೆಸ್‌ನ ‘ಆಪರೇಷನ್‌ ಹಸ್ತ’ವನ್ನೇ ಅಸ್ತ್ರವಾಗಿಸಿಕೊಂಡಿರುವ ಕಮಲ ಪಡೆಯು ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆ ಮುಂದೂಡಲು ತೆರೆಮರೆಯಲ್ಲೇ ತಂತ್ರ ಹೆಣೆದಿದೆ.

ಸಂಸದ ಎಸ್‌.ಮುನಿಸ್ವಾಮಿ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಪುರಸಭೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಮತ್ತು ಬಿಜೆಪಿ ತೀವ್ರ ಕಸರತ್ತು ನಡೆಸಿವೆ.

ಹೈಕೋರ್ಟ್‌ ಆದೇಶದಂತೆ ನ.10ರೊಳಗೆ ಪುರಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಈ ಆದೇಶದಂತೆ ಬಿಜೆಪಿಯು ಚುನಾವಣಾಧಿಕಾರಿಯಾದ ತಹಶೀಲ್ದಾರ್‌ ಮೇಲೆ ಒತ್ತಡ ತಂದು ಕೊನೆಯ ದಿನವಾದ ನ.10ರಂದೇ ಚುನಾವಣೆ ನಡೆಸುವಂತೆ ಮಾಡಿತ್ತು.

ADVERTISEMENT

ಈ ನಡುವೆ ಸದ್ದಿಲ್ಲದೆ ಆಪರೇಷನ್‌ ಹಸ್ತ ನಡೆಸಿರುವ ಕಾಂಗ್ರೆಸ್‌ ಮುಖಂಡರು 11ನೇ ವಾರ್ಡ್‌ ಸದಸ್ಯೆ ಬಿಜೆಪಿಯ ವಿಜಯಲಕ್ಷ್ಮೀ ಅವರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ‘ಆಪರೇಷನ್‌ ಕಮಲ’ ಭೀತಿಯಿಂದ ಕಾಂಗ್ರೆಸ್‌ ತನ್ನ 11 ಸದಸ್ಯರು, ಇಬ್ಬರು ಪಕ್ಷೇತರ ಸದಸ್ಯರು ಮತ್ತು ಜೆಡಿಎಸ್‌ನ ಒಬ್ಬ ಸದಸ್ಯರನ್ನು ತಿಂಗಳ ಹಿಂದೆಯೇ ಪ್ರವಾಸಕ್ಕೆ ಕಳುಹಿಸಿತ್ತು.

ಹಾಸನದ ರೆಸಾರ್ಟ್‌ವೊಂದರಲ್ಲಿ ಸದಸ್ಯರೊಂದಿಗೆ ಬೀಡು ಬಿಟ್ಟಿದ್ದ ಕಾಂಗ್ರೆಸ್‌ ಮುಖಂಡರು ನಾಲ್ಕೈದು ದಿನಗಳ ಹಿಂದೆ ಚುನಾವಣಾ ಕಾರ್ಯತಂತ್ರ ಬದಲಿಸಿದ್ದಾರೆ. ರೆಸಾರ್ಟ್‌ನಲ್ಲಿದ್ದ 14 ಸದಸ್ಯರನ್ನು ರಾತ್ರೋರಾತ್ರಿ ಗೋವಾಕ್ಕೆ ಕಳುಹಿಸಲಾಗಿದೆ. ಇದೀಗ ವಿಜಯಲಕ್ಷ್ಮೀ ಅವರು ‘ಕೈ’ ಪಾಳಯಕ್ಕೆ ಜಿಗಿದಿದ್ದು, ಅವರನ್ನು ಗೋವಾ ಬಳಿ ರೆಸಾರ್ಟ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭೂಮಿಕೆ ಸಿದ್ಧ: ‘ಆಪರೇಷನ್‌ ಹಸ್ತ’ದಿಂದ ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದ್ದು, ಕಮಲ ಪಾಳಯವು ಅಂತಿಮವಾಗಿ ಚುನಾವಣೆ ಮುಂದೂಡಿಕೆಯ ಅಸ್ತ್ರ ಪ್ರಯೋಗಿಸಿದೆ. ಪಕ್ಷದ ಸದಸ್ಯೆ ವಿಜಯಲಕ್ಷ್ಮೀ ಅವರನ್ನು ಕಾಂಗ್ರೆಸ್‌ ಮುಖಂಡರು ಅಪಹರಿಸಿದ್ದಾರೆ ಎಂದು ಬಿಜೆಪಿ ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣವನ್ನೇ ಆಧರಿಸಿ ಚುನಾವಣೆ ಮುಂದೂಡುವಂತೆ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಮಾಲೂರು ತಹಶೀಲ್ದಾರ್‌ಗೆ ದೂರು ಕೊಟ್ಟು ಭೂಮಿಕೆ ಸಿದ್ಧಪಡಿಸಿದ್ದಾರೆ. ಜತೆಗೆ ತಮ್ಮ ಪಕ್ಷದ ಸದಸ್ಯರಿಗೆ ಕಾಂಗ್ರೆಸ್‌್ ಮುಖಂಡರು ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ ಮುಖಂಡರು ಮತ್ತು ಬಿಜೆಪಿ ಸದಸ್ಯರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ಒಳಗೊಂಡ ಸಿ.ಡಿಯನ್ನು ಸಾಕ್ಷ್ಯವಾಗಿ ನೀಡಿದ್ದಾರೆ.

ಅಪಹರಣದ ದಾಳ: ಈ ಹಿಂದೆ ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಸದಸ್ಯರ ಅಪಹರಣ ಪ್ರಕರಣದ ಆಧಾರದಲ್ಲಿ ಮುಂದೂಡಲಾಗಿತ್ತು. ಇದೇ ಮಾದರಿಯಲ್ಲಿ ಮಾಲೂರು ಪುರಸಭೆ ಚುನಾವಣೆ ಮುಂದೂಡಿಸಲು ಬಿಜೆಪಿ ಮುಖಂಡರು ಅಧಿಕಾರಿಗಳ ಮಟ್ಟದಲ್ಲಿ ದಾಳ ಉರುಳಿಸಿದ್ದಾರೆ. ಪೂರ್ವ ನಿಗದಿಯಂತೆ ನ.10ರಂದು ಚುನಾವಣೆ ನಡೆಯುವುದು ಅನುಮಾನವಾಗಿದ್ದು, ಕೈ ಪಾಳಯದ ನಡೆ ನಿಗೂಢವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.