ಮಾಲೂರು: ತಾಲ್ಲೂಕಿನ ಹುಲ್ಕೂರು ಗ್ರಾಮದ ಬಳಿ ಭಾನುವಾರ ಸಂಜೆ ದ್ವಿಚಕ್ರ ವಾಹನ ಸವಾರನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಅಂಜಿನಪ್ಪ (55) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಆಂಜಿನಪ್ಪ ಹುಲ್ಕೂರು ಗ್ರಾಮದಲ್ಲಿ ಬೂಸ ಅಂಗಡಿ ನಡೆಸುತ್ತಿದ್ದು, ಕಾಳಿಕಾಂಬ ದೇವಾಲಯದ ಪೂಜಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮಾಲೂರು ನಗರದ ರಾಜೀವ್ ನಗರದಲ್ಲಿ ವಾಸವಾಗಿದ್ದು, ಭಾನುವಾರ ಸಂಜೆ ತಮ್ಮ ಊರಿನ ಬೂಸ ಅಂಗಡಿ ಬಾಗಿಲು ಮುಚ್ಚಿ ಮಾಲೂರು ಕಡೆ ಜೂಪಿಟರ್ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾರೆ.
ಸುಮಾರು 1 ಕಿ.ಮೀ ದೂರದ ಹುಲ್ಕೂರು ಮತ್ತು ಅರಳೇರಿ ಗ್ರಾಮಗಳ ಮಧ್ಯೆ ದುಷ್ಕರ್ಮಿಗಳು ವಾಹನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಅವರ ಪುತ್ರ ಎ.ರಾಹುಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಸರ್ಕಲ್ ಇನ್‌ಸ್ಪೆಕ್ಟರ್ ರಾಮಪ್ಪ ಗುತ್ತೇರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.