ADVERTISEMENT

ಕೋಲಾರ | ಕೃತಕವಾಗಿ ಮಾವು ಮಾಗಿಸುವ ದಂಧೆ

ಸದ್ದಿಲ್ಲದೆ ಉದರ ಸೇರುತ್ತಿರುವ ವಿಷಕಾರಿ ರಾಸಾಯನಿಕ: ಆರೋಗ್ಯಕ್ಕೆ ಕುತ್ತು

ಜೆ.ಆರ್.ಗಿರೀಶ್
Published 26 ಮೇ 2020, 19:30 IST
Last Updated 26 ಮೇ 2020, 19:30 IST
ಕೋಲಾರದ ಕ್ಲಾಕ್‌ಟವರ್ ಬಳಿಯ ಅಂಗಡಿಯೊಂದರಲ್ಲಿ ವ್ಯಾಪಾರಿಯು ಕೃತಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರುತ್ತಿರುವುದು.
ಕೋಲಾರದ ಕ್ಲಾಕ್‌ಟವರ್ ಬಳಿಯ ಅಂಗಡಿಯೊಂದರಲ್ಲಿ ವ್ಯಾಪಾರಿಯು ಕೃತಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರುತ್ತಿರುವುದು.   

ಕೋಲಾರ: ಜಿಲ್ಲೆಯಲ್ಲಿ ಕೃತಕವಾಗಿ ಮಾವು ಹಣ್ಣು ಮಾಗಿಸಿ ಮಾರಾಟ ಮಾಡುವ ದಂಧೆ ಶುರುವಾಗಿದ್ದು, ಹಣ್ಣು ಮಾಗಿಸಲು ಬಳಸುವ ವಿಷಕಾರಿ ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕವು ಸದ್ದಿಲ್ಲದೆ ಗ್ರಾಹಕರ ಉದರ ಸೇರುತ್ತಿದೆ.

ಜಿಲ್ಲೆಯಲ್ಲಿ 52,371 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಶ್ರೀನಿವಾಸಪುರ ತಾಲ್ಲೂಕು ಮಾವಿನ ನಗರಿ ಎಂದೇ ಖ್ಯಾತಿ ಪಡೆದಿದೆ. ರಸಪುರಿ, ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಂ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳಿವೆ.

ಜಿಲ್ಲೆಯು ಮಾವು ಬೆಳೆಗೆ ರಾಜ್ಯದಲ್ಲೇ ಹೆಸರಾಗಿದ್ದು, ಇಲ್ಲಿಂದ ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಟನ್‌ಗಟ್ಟಲೇ ಮಾವಿನ ಹಣ್ಣು ರಫ್ತಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಬಾರಿ ಜೂನ್ ಮೊದಲ ವಾರದಲ್ಲಿ ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಮಾರಾಟ ಆರಂಭವಾಗುತ್ತದೆ.

ADVERTISEMENT

ಆದರೆ, ವರ್ತಕರು ಲಾಭದಾಸೆಗೆ ಮತ್ತು ಗ್ರಾಹಕರನ್ನು ಸೆಳೆಯಲು ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕ ಬಳಸಿ ಅವಧಿಗೂ ಮುನ್ನವೇ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದಾರೆ. ನೆರೆಯ ಆಂಧ್ರಪ್ರದೇಶ, ರಾಜ್ಯದ ರಾಮನಗರ, ಗದಗ, ಬೆಳಗಾವಿ ಜಿಲ್ಲೆಯಿಂದ ಕಡಿಮೆ ಬೆಲೆಗೆ ಮಾವಿನ ಕಾಯಿ ಖರೀದಿಸಿಕೊಂಡು ಬಂದು ಕೃತಕವಾಗಿ ಮಾಗಿಸುವ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯುತ್ತಿದೆ.

ರಸ್ತೆಯ ಅಕ್ಕಪಕ್ಕದ ಪಾದಚಾರಿ ಮಾರ್ಗದ ಅಂಗಡಿ ಹಾಗೂ ತಳ್ಳು ಗಾಡಿಗಳಲ್ಲಿ ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಕಡಿಮೆ ಬೆಲೆಗೆ ಮಾರಲಾಗುತ್ತಿದೆ. ಈ ಹಣ್ಣುಗಳು ನೋಡಲು ಆಕರ್ಷಕವಾಗಿದ್ದು, ಗ್ರಾಹಕರನ್ನು ನೋಟದಲ್ಲೇ ಸೆಳೆಯುತ್ತಿವೆ. ಆದರೆ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳಿಗೆ ಹೋಲಿಸಿದರೆ ಇವು ಹೆಚ್ಚು ರುಚಿಕರವಾಗಿರುವುದಿಲ್ಲ.

ಪೂರ್ಣ ಪ್ರಮಾಣದಲ್ಲಿ ಮಾಗದ ಈ ಹಣ್ಣುಗಳಲ್ಲಿ ಹುಳಿ ಅಂಶ ಹೆಚ್ಚಿರುತ್ತದೆ. ಜತೆಗೆ ಈ ಹಣ್ಣುಗಳು ಗುಣಮಟ್ಟದ್ದಾಗಿರುವುದಿಲ್ಲ ಹಾಗೂ ಬಾಳಿಕೆ ಅವಧಿ ತುಂಬಾ ಕಡಿಮೆ. ಈ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಆದರೂ ಕೃತಕವಾಗಿ ಮಾಗಿಸಿದ ಹಣ್ಣುಗಳ ಆಕರ್ಷಣೆಗೆ ಮಾರು ಹೋಗುತ್ತಿರುವ ಗ್ರಾಹಕರು ದುಡ್ಡು ಕೊಟ್ಟು ಈ ಹಣ್ಣುಗಳನ್ನು ಖರೀದಿಸಿ ತಿಂದು ಕಾಯಿಲೆ ಬೀಳುತ್ತಿದ್ದಾರೆ.

ಶಿಕ್ಷಾರ್ಹ ಅಪರಾಧ: ಆಹಾರ ಭದ್ರತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆ ಅನ್ವಯ ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕವನ್ನು ಮಾವಿನ ಕಾಯಿ ಮಾಗಿಸುವುದಕ್ಕೆ ಬಳಸುವಂತಿಲ್ಲ. ಅಲ್ಲದೇ, ಈ ರಾಸಾಯನಿಕವನ್ನು ಮಾರಾಟ ಮಾಡುವಂತಿಲ್ಲ.

ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್‌ 50ರ ಪ್ರಕಾರ ನೈಸರ್ಗಿಕವಾಗಿ ಮಾಗದ ಹಣ್ಣನ್ನು ಮಾರಾಟ ಮಾಡಿದರೆ ದಂಡ ವಿಧಿಸಬಹುದು. ಜತೆಗೆ ಯಾವುದೇ ವ್ಯಕ್ತಿ ಅಸುರಕ್ಷಿತ ಆಹಾರವನ್ನು ಮಾರುವುದು, ಆಮದು ಮಾಡಿಕೊಳ್ಳುವುದು, ದಾಸ್ತಾನು ಮಾಡುವುದು ಅಥವಾ ವಿತರಣೆ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೂ ವ್ಯಾಪಾರಿಗಳು ಈ ಕಾಯ್ದೆ ಉಲ್ಲಂಘಿಸಿ ಕ್ಯಾಲ್ಸಿಯಂ ಕಾರ್ಬೈಡ್‌ ಅನಿಲದಿಂದ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸುವ ದಂಧೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.