ADVERTISEMENT

ಮಾವು ಬೆಲೆ ಕುಸಿತ: ರೈತರು ಕಂಗಾಲು

ಕೋವಿಡ್‌ ಬಿಸಿಗೆ ವಹಿವಾಟು ಏರಿಳಿತ: ತೋಪಿನಲ್ಲೇ ಉಳಿದ ಮಾವು

ಜೆ.ಆರ್.ಗಿರೀಶ್
Published 16 ಜೂನ್ 2021, 12:50 IST
Last Updated 16 ಜೂನ್ 2021, 12:50 IST
ಶ್ರೀನಿವಾಸಪುರ ಎಪಿಎಂಸಿಯಲ್ಲಿ ಮಾವು ವಹಿವಾಟಿನ ನೋಟ
ಶ್ರೀನಿವಾಸಪುರ ಎಪಿಎಂಸಿಯಲ್ಲಿ ಮಾವು ವಹಿವಾಟಿನ ನೋಟ   

ಕೋಲಾರ: ಜಿಲ್ಲೆಯಲ್ಲಿ ಮಾವು ವಹಿವಾಟಿಗೆ ಕೋವಿಡ್‌ ಬಿಸಿ ತಟ್ಟಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಗಣನೀಯ ಕುಸಿತ ಕಂಡಿದೆ.

ಕೋವಿಡ್‌ ಭೀತಿಯಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾವು ಬೆಲೆ ಕುಸಿತವು ದೊಡ್ಡ ಪೆಟ್ಟು ಕೊಟ್ಟಿದೆ. ಜೂನ್‌ 14ರವರೆಗೆ ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿ, ಮಾರುಕಟ್ಟೆಯಲ್ಲಿ ಮಾವು ಬೆಲೆ ಇಳಿಮುಖವಾಗಿದೆ.

ಜಿಲ್ಲೆಯು ಮಾವು ಬೆಳೆಗೆ ರಾಜ್ಯದಲ್ಲೇ ಹೆಸರಾಗಿದ್ದು, ಶ್ರೀನಿವಾಸಪುರ ತಾಲ್ಲೂಕು ಮಾವಿನ ನಗರಿ ಎಂದೇ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಸುಮಾರು 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಇಲ್ಲಿಂದ ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಮಾವಿನ ಹಣ್ಣು ರಫ್ತಾಗುತ್ತದೆ. ರಸಪುರಿ, ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಂ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳಿವೆ.

ADVERTISEMENT

ಪ್ರಸಕ್ತ ಹಂಗಾಮಿನಲ್ಲಿ ಸುಮಾರು 2.75 ಲಕ್ಷ ಟನ್‌ ಮಾವಿನ ಫಸಲು ನಿರೀಕ್ಷಿಸಲಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾವು ವಹಿವಾಟು ಆರಂಭವಾಗಿದೆ. ಆದರೆ, ಕೋವಿಡ್‌ ಆತಂಕದ ಕಾರಣಕ್ಕೆ ಹೊರ ರಾಜ್ಯಗಳ ವರ್ತಕರು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿಲ್ಲ.

ಮೂರ್ನಾಲ್ಕು ವರ್ಷಗಳಿಂದ ಮಾವಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. 2018ರಲ್ಲಿ ನಿಫಾ ವೈರಸ್‌ ಭೀತಿಯಿಂದಾಗಿ ಬೆಲೆ ಇಳಿಕೆಯಾಗಿ ರೈತರು ತೊಂದರೆ ಅನುಭವಿಸಿದ್ದರು. ಕಳೆದ ವರ್ಷ ಸಹ ಇದೇ ಅವಧಿಯಲ್ಲಿ ಲಾಕ್‌ಡೌನ್‌ ಜಾರಿಯಾಗಿ ಮಾವು ಬೆಲೆ ಕುಸಿದಿತ್ತು. ಹಿಂದಿನ ವರ್ಷದ ನಷ್ಟದಿಂದ ಚೇತರಿಸಿಕೊಳ್ಳುತ್ತಿದ್ದ ಮಾವು ಬೆಳೆಗಾರರನ್ನು ಬೆಲೆ ಕುಸಿತವು ಮತ್ತೊಮ್ಮೆ ಸಂಕಷ್ಟಕ್ಕೆ ದೂಡಿದೆ. ಈ ಬಾರಿ ಭರ್ಜರಿ ಮಾವಿನ ಫಸಲು ಬಂದಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಕುಸಿತವು ನಿರಾಸೆ ಮೂಡಿಸಿದೆ.

ತೋಪಿನಲ್ಲೇ ಕೊಳೆಯುತ್ತಿವೆ: ಮಾರುಕಟ್ಟೆಯಲ್ಲಿ ಸದ್ಯ ತೋತಾಪುರಿ ಸಗಟು ದರ ಕೆ.ಜಿಗೆ ₹ 7, ಮಲಗೋವಾ ₹ 15, ನೀಲಂ ₹ 20, ಮಲ್ಲಿಕಾ ₹ 25, ರಾಜ್‌ಗಿರಾ ₹ 20 ಇದೆ. ಹಿಂದಿನ ವರ್ಷ ತೋತಾಪುರಿ ಸಗಟು ದರ ₹ 15 ಇತ್ತು. ಈ ಬಾರಿ ಅರ್ಧದಷ್ಟು ಬೆಲೆ ಕುಸಿದಿದೆ. ಜಿಲ್ಲೆಯಲ್ಲಿ ಬಹುಪಾಲು ರೈತರು ತೋತಾಪುರಿ ಬೆಳೆದಿದ್ದು, ಬೆಲೆ ಇಲ್ಲದೆ ಚಿಂತಿತರಾಗಿದ್ದಾರೆ.

‘ಮಾವಿನ ಕಾಯಿ ಕೀಳುವ ಕಾರ್ಮಿಕರ ಕೂಲಿ ಹಣ, ಸಾಗಣೆ ವೆಚ್ಚ, ದಲ್ಲಾಳಿಗಳ ಕಮಿಷನ್‌ ಖರ್ಚು ಕಳೆದು ಹಣವೇ ಉಳಿಯುತ್ತಿಲ್ಲ. ಮಂಡಿಗಳಲ್ಲಿ ಮೂರ್ನಾಲ್ಕು ದಿನದವರೆಗೆ ಹರಾಜು ನಡೆಯುವುದಿಲ್ಲ. ಕೃಷಿ ಕೆಲಸ ಬಿಟ್ಟು ಹಣ್ಣಿನ ಹರಾಜಿಗಾಗಿ ಮಾರುಕಟ್ಟೆಯಲ್ಲಿ ದಿನಗಟ್ಟಲೇ ಕಾಯುವ ಪರಿಸ್ಥಿತಿ ಇದೆ’ ಎಂದು ಮಾವು ಬೆಳೆಗಾರರು ‘ಪ್ರಜಾವಾಣಿ’ ಜತೆ ಅಲವತ್ತುಕೊಂಡರು.

ಬೆಲೆ ಕುಸಿತದ ಕಾರಣಕ್ಕೆ ಸಾಕಷ್ಟು ರೈತರು ಮಾವು ಹಣ್ಣು ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದಾರೆ. ಹಣ್ಣುಗಳು ಮರದಿಂದ ಉದುರಿ ತೋಪಿನಲ್ಲೇ ಕೊಳೆಯುತ್ತಿವೆ. ಕೆಲ ರೈತರು ಮಾವು ಕೊಯ್ಲು ಮಾಡಿ ಸಿಕ್ಕಷ್ಟು ಬೆಲೆಗೆ ಮಾರುತ್ತಿದ್ದಾರೆ. ಬೇಗನೆ ಕೆಟ್ಟು ಹೋಗುವ ಮಾವು ಹಣ್ಣಿನ ಸಂರಕ್ಷಣೆಗೆ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕಗಳಿಲ್ಲ. ಈ ಸಂಬಂಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರ ಸಂಸ್ಕರಣಾ ಘಟಕದ ಬೇಡಿಕೆಗೆ ಸ್ಪಂದಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.