
ಕೋಲಾರ: ಮನ್ ಕೀ ಬಾತ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಮಾಜದ ಕಟ್ಟಕಡೆಯ ವ್ಯಕ್ತಿ ಜತೆಗೂ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದಾರೆ. ಜನರ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತ ಜನರನ್ನು ಅಭಿವೃದ್ಧಿಯಿಂದ ವಂಚಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಭಾನುವಾರ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಅವರ ಕಠಾರಿಪಾಳ್ಯದ ನಿವಾಸದಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೋದಿಯವರು ಪ್ರಚಾರ ಪ್ರಿಯರಲ್ಲ. ಮಾಧ್ಯಮದ ಜತೆಗೆ ಹೆಚ್ಚು ಕಾಣಿಸಿಕೊಳ್ಳುವುದೂ ಇಲ್ಲ. ಅವರ ನಡೆ ಏನಿದ್ದರೂ ದೇಶದ ಅಭಿವೃದ್ಧಿಯ ಚಿಂತನೆಯಷ್ಟೇ. ಮನ್ ಕೀ ಬಾತ್ ಮೂಲಕ ಪ್ರತಿ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಬೇರೆ ಪಕ್ಷಗಳು ಮಾಡಲಾಗದ್ದನ್ನು ಅವರು ಮಾಡಿ ತೋರಿಸಿದ್ದಾರೆ. ಕಾಂಗ್ರೆಸ್ಸಿನವರಂತೆ ಮಾಡಲಾಗದ್ದನ್ನು ಮಾಡಿದ್ದೇವೆ ಎಂದು ಜನರಿಗೆ ನಕ್ಷತ್ರ ತೋರಿಸಲ್ಲ ಎಂದರು.
ಯಾವುದೇ ಪ್ರಚಾರಕ್ಕಾಗಿ ಮಾಧ್ಯಮವನ್ನು ಬಳಸಿಕೊಂಡಿಲ್ಲ. ಬದಲಾಗಿ ಅವರು ದೇಶದ ಮನೆ ಮಾತಾಗಿದ್ದಾರೆ. ಅಷ್ಟೇ ಅಲ್ಲ; ಆಯಾ ಜಿಲ್ಲೆಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತಾ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳು ಇದನ್ನೂ ಟೀಕಿಸುತ್ತಿವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಇಲ್ಲದೆ ಬೇರೆ ಬೇರೆ ವಿಚಾರ ಮಾತನಾಡುತ್ತಾ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮನ್ ಕೀ ಬಾತ್‍ನಲ್ಲಿ ಈ ಬಾರಿ ಚಿಕ್ಕಮಗಳೂರು, ಹಾಸನ ಕಾಫಿ ಬೆಳೆಗಾರರ ಸಂಕಷ್ಟದ ಕುರಿತು ಮಾತನಾಡಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮಾತನಾಡಿದ್ದಾರೆ. ಒಂದೊಂದು ತಿಂಗಳ ಮನ್ ಕೀ ಬಾತ್‍ನಲ್ಲಿ ಒಂದೊಂದು ಸಮಸ್ಯೆಯ ಕುರಿತು ಬೆಳಕು ಚೆಲ್ಲಿ ಜನರ ನೆರವಿಗೆ ಬಂದಿದ್ದಾರೆ ಎಂದರು.
ಏನೂ ಮಾಡಲಾಗದ ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಶೂನ್ಯವಾಗಿದೆ. ಜನರ ದಿಕ್ಕು ತಪ್ಪಿಸಲು ಇಲ್ಲ ಸಲ್ಲದ ವಿಷಯ ಮಾತನಾಡುತ್ತಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಿದ ನಿದರ್ಶನವೂ ಇಲ್ಲ. ಕೇವಲ ಜನರನ್ನು ವಂಚಿಸಲಾಗುತ್ತಿದೆ. ಈ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಒಂದೂ ಅರ್ಥವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಪಕ್ಷದ ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ವಿಜಯಕುಮಾರ್, ತಿಮ್ಮರಾಯಪ್ಪ, ಸಾ.ಮಾ ಅನಿಲ್ ಬಾಬು, ಕೆಂಬೋಡಿ ನಾರಾಯಣಸ್ವಾಮಿ, ನಾಮಾಲ ಮಂಜು, ಹಾರೋಹಳ್ಳಿ ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.