ADVERTISEMENT

ಹುತಾತ್ಮ ಯೋಧರಿಗೆ ಬಜರಂಗಳ ಶ್ರದ್ಧಾಂಜಲಿ

ಪಾಕಿಸ್ತಾನದ ವಿರುದ್ಧ ಆಕ್ರೋಶ: ಉಗ್ರರ ನಿಗ್ರಹಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 16:08 IST
Last Updated 15 ಫೆಬ್ರುವರಿ 2019, 16:08 IST
ಕಾಶ್ಮೀರದಲ್ಲಿ ವೀರಮರಣವಪ್ಪಿದ ಯೋಧರ ಸ್ಮರಣಾರ್ಥ ಬಜರಂಗದಳ ಕಾರ್ಯಕರ್ತರು ಕೋಲಾರದಲ್ಲಿ ಶುಕ್ರವಾರ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಕಾಶ್ಮೀರದಲ್ಲಿ ವೀರಮರಣವಪ್ಪಿದ ಯೋಧರ ಸ್ಮರಣಾರ್ಥ ಬಜರಂಗದಳ ಕಾರ್ಯಕರ್ತರು ಕೋಲಾರದಲ್ಲಿ ಶುಕ್ರವಾರ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.   

ಕೋಲಾರ: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರಮರಣವಪ್ಪಿದ ಯೋಧರ ಸ್ಮರಣಾರ್ಥ ಬಜರಂಗದಳ ಕಾರ್ಯಕರ್ತರು ಇಲ್ಲಿ ಶುಕ್ರವಾರ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

‘ನರರೂಪ ರಾಕ್ಷಸರು ಹಾಗೂ ಹೇಡಿಗಳಾದ ಪಾಕಿಸ್ತಾನದ ಉಗ್ರರು ದೇಶದ ವೀರ ಯೋಧರನ್ನು ಹತ್ಯೆ ಮಾಡಿರುವುದು ಖಂಡನೀಯ. ಈ ಕೃತ್ಯವನ್ನು ಇಡೀ ದೇಶವೇ ಖಂಡಿಸುತ್ತಿದೆ’ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಬಾಬು ಹೇಳಿದರು.

‘ಕೇಂದ್ರ ಸರ್ಕಾರ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಬೇಕು. ಪಾಕಿಸ್ತಾನದ ಉಗ್ರರು ಭವಿಷ್ಯದಲ್ಲಿ ಭಾರತದ ಕಡೆ ತಿರುಗಿಯೂ ನೋಡದಂತೆ ಭಾರತ ಸೇನೆಯು ಪ್ರತ್ಯುತ್ತರ ನೀಡಬೇಕು. ಭಯೋತ್ಪಾದನಾ ರಾಷ್ಟ್ರವೆಂದು ಕುಖ್ಯಾತಿ ಪಡೆದಿರುವ ಪಾಕಿಸ್ತಾನಕ್ಕೆ ಜಾಗತಿಕವಾಗಿ ನಿರ್ಬಂಧ ಹೇರಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ದೇಶ ಕಾಯುವ ಯೋಧರ ಮೇಲೆ ಕಲ್ಲು ತೂರುವ ದ್ರೋಹಿಗಳನ್ನು ಕೊಂದರೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಆರೋಪ ಮಾಡಲಾಗುತ್ತದೆ. ಇನ್ನೆಷ್ಟು ವೀರ ಯೋಧರನ್ನು ಕಳೆದುಕೊಳ್ಳಬೇಕು? ಯೋಧರ ಸಾವಿನಲ್ಲೂ ರಾಜಕಾರಣ ಮಾಡುವ ನೀಚರಿಗೆ ಜನರೇ ಉತ್ತರ ನೀಡಬೇಕು’ ಎಂದು ಬಜರಂಗದಳ ಸದಸ್ಯ ಬಾಲಾಜಿ ಹೇಳಿದರು.

‘ಯೋಧರನ್ನು ಹತ್ಯೆ ಮಾಡಿರುವ ಉಗ್ರರಿಗೆ ಬಂದೂಕಿನ ಮೂಲಕವೇ ಉತ್ತರಿಸಲು ಕೇಂದ್ರ ಸರ್ಕಾರವು ಸೇನೆಗೆ ಸಂಪೂರ್ಣ ಅಧಿಕಾರ ನೀಡಬೇಕು. ಭಯೋತ್ಪಾದನಾ ಚಟುವಟಿಕೆಗಳ ನಿಯಂತ್ರಣಕ್ಕೆ ಕೇಂದ್ರವು ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರವು ಕೇವಲ ರಾಜತಾಂತ್ರಿಕ ನಿರ್ಧಾರ ಪ್ರಕಟಿಸಿದರೆ ಸಾಲದು. ಯುದ್ಧದ ಮೂಲಕ ರಕ್ತಕ್ಕೆ ರಕ್ತವೆಂಬ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು.

ಪೈಶಾಚಿಕ ಕೃತ್ಯ: ‘ದೇಶ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಗಡಿ ಕಾಯುತ್ತಿರುವ ಯೋಧರ ಸಾವಿಗೆ ಬೆಲೆ ಇಲ್ಲವಾಗಿದೆ. ಹುತಾತ್ಮ ಯೋಧರ ಕುಟುಂಬಗಳು ಆತ್ಮಸ್ಥೈರ್ಯ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿವೆ. ಉಗ್ರರು ಜೀವದ ಬೆಲೆ ತಿಳಿಯದೆ ಪೈಶಾಚಿಕ ಕೃತ್ಯ ನಡೆಸಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಿ.ಕೆ.ಶಿವಣ್ಣ ಕಿಡಿಕಾರಿದರು.

ಬಜರಂಗದಳ ಜಿಲ್ಲಾ ಸಹ ಸಂಚಾಲಕ ಚಲಪತಿ, ಸದಸ್ಯರಾದ ಆನಂದ್, ರಮೇಶ್‌ರಾಜ್‌, ಪ್ರವೀಣ್, ಮಂಜು, ನಗರಸಭೆ ಸದಸ್ಯ ಕಾಶಿ ವಿಶ್ವನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.