
ಕೋಲಾರ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಹಿರಿಯ ಕ್ರೀಡಾಳುಗಳ ಮೊಗದಲ್ಲಿ ಹುಮ್ಮಸ್ಸು ಎದ್ದು ಕಂಡಿತು. 25 ಜಿಲ್ಲೆಗಳ ಸುಮಾರು 700 ಅಥ್ಲೀಟ್‌ಗಳು ಪಾಲ್ಗೊಂಡಿದ್ದು, ವಯಸ್ಸಿಗೂ ಮೀರಿದ ಉತ್ಸಾಹ ಇತ್ತು. ಲವಲವಿಕೆಯಿಂದ ಓಟದ ಸ್ಪರ್ಧೆಗಲ್ಲಿ ಪಾಲ್ಗೊಂಡರು.
ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಮತ್ತು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ಶನಿವಾರ ಇಲ್ಲಿ ಆರಂಭವಾದ 44ನೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕಂಡುಬಂದ ದೃಶ್ಯಗಳಿವೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಎಂ.ಮಲ್ಲೇಶ್ ಬಾಬು, ‘ಆಟೋಟಗಳಲ್ಲಿ ಪಾಲ್ಗೊಳ್ಳುವ ಉತ್ಸಾಹಕ್ಕೆ ವಯಸ್ಸಿನ ಅಂತರವಿಲ್ಲ ಎಂಬುವುದನ್ನು ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯಮನ್‌ಷಿಪ್ ಸಾಕ್ಷಿ. ಇದೊಂದು ಅರೋಗ್ಯಕರ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.
ನಾನು ವಿದ್ಯಾರ್ಥಿದೆಸೆಯಲ್ಲಿ ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದೆ. ತಂದೆ ಮುನಿಸ್ವಾಮಿ ಮೈಸೂರು ಲ್ಯಾಂಪ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಕೋಲಾರದಲ್ಲಿ ರಾಜ್ಯ ಮಟ್ಟದ ಟೂರ್ನಿ ಆಯೋಜಿಸಿದ್ದರು. ಮತ್ತೆ ಇಂಥ ಟೂರ್ನಿಯನ್ನು ಕೋಲಾರದಲ್ಲಿ ಆಯೋಜಿಸುವ ಚಿಂತನೆ ಇದೆ ಎಂದರು.
95 ವರ್ಷ ವಯಸ್ಸಿನ ಪೈಲ್ವಾನ್ ರವೀಂದ್ರನಾಥ್ ಸಹ ಭಾಗವಹಿಸಿರುವುದು ಪ್ರೇರಣದಾಯಕ ವಿಚಾರ ಎಂದು ಶ್ಲಾಘಿಸಿದರು.
ಕ್ರೀಡಾಕೂಟ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ‘ಈ ಚಾಂಪಿಯನ್‌ಷಿಪ್‌ನಲ್ಲಿ 30 ರಿಂದ 95 ವರ್ಷದ ವಯೋಮಾನದವರು ಭಾಗವಹಿಸಿರುವುದು ಅಭಿನಂದನಾರ್ಹವಾಗಿದೆ. ಆರೋಗ್ಯದಲ್ಲಿ ಏನೇ ಸಮಸ್ಯೆಗಳಿದ್ದರೂ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ಸಾಹ ಪ್ರದರ್ಶಿಸಲು ಮುಂದಾಗಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಚಿನ್ನ ಬರಿದಾದರೂ ಚಿನ್ನದಂಥ ಹೃದಯವಂತರು ಇದ್ದಾರೆ. ಕೋಲಾರಮ್ಮ, ಅಂತರಗಂಗೆ ಕಾಶಿ ವಿಶ್ವನಾಥನ ಆರ್ಶೀವಾದ ಪಡೆದು ಸುತ್ತಮುತ್ತಲಿನ ಪ್ರವಾಸಿ ತಾಣ ವೀಕ್ಷಿಸಿ ಎಂದರು.
ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿಗೆ ಅಥ್ಲೀಟ್‌ಗಳನ್ನು ಪರಿಚಯ ಮಾಡಿಸಲಾಯಿತು. ಪಥಸಂಚಲನ ನಡೆಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಬೆಳಗಾವಿ, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಉತ್ತರ ಕನ್ನಡ, ಧಾರವಾಡ, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಥ್ಲೀಟ್‌ಗಳು ಭಾಗವಹಿಸಿದ್ದಾರೆ.
ವೇದಿಕೆಯಲ್ಲಿ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ವಿ.ಕೃಷ್ಣಾರೆಡ್ಡಿ, ಅಂತರರಾಷ್ಟ್ರೀಯ ಕ್ರೀಡಾಪಟು ವಿ.ಮಾರಪ್ಪ, ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಡೇವಿಡ್ ಪ್ರೇಮನಾಥ್, ಕಾರ್ಯದರ್ಶಿ ಎಚ್.ಸಿ.ಷಣ್ಮುಗಂ, ಜಿಲ್ಲಾ ಖಜಾಂಜಿ ಕೆ.ಟಿ.ಸುರೇಶ್ ಬಾಬು, ಮಹಿಳಾ ಪ್ರತಿನಿಧಿಗಳಾದ ಮಹಾದೇವಿ ಎಸ್.ಪಾಟೀಲ್, ಶಾಂತಮ್ಮ ಎಚ್., ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಜೆಡಿಯು ರಾಜ್ಯ ಮುಖಂಡ ಡಾ.ಕೆ.ನಾಗರಾಜ್, ಡಿಐಸಿ ಉಪನಿರ್ದೇಶಕ ರವಿಚಂದ್ರನ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ವಿಜಯಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.