ADVERTISEMENT

ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ: ಕಾಲೇಜು ಆಡಳಿತ ಮಂಡಳಿ, ವೈದ್ಯರ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 15:35 IST
Last Updated 5 ಜೂನ್ 2023, 15:35 IST
   

ಕೋಲಾರ: ಮಕ್ಕಳ ವೈದ್ಯೆಯಾಗುವ ಕನಸು ಹೊತ್ತು ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಭಾನುವಾರ ಕೋಲಾರ ತಾಲ್ಲೂಕಿನ ಕೆಂದಟ್ಟಿ ಬಳಿಯ ಕ್ವಾರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ (ಮಕ್ಕಳ ತಜ್ಞೆ) ಮೊದಲ ವರ್ಷದಲ್ಲಿ ವ್ಯಾಸಂಗದಲ್ಲಿ ತೊಡಗಿದ್ದ ಬಳ್ಳಾರಿಯ ಕೌಲ್‌ ಬಜಾರ್‌ನ ನಿವಾಸಿ ಪಿ.ದರ್ಶಿನಿ (24) ಆತ್ಮಹತ್ಯೆ ಮಾಡಿಕೊಂಡವರು.

ಕೊಪ್ಪಳದಲ್ಲಿ ಎಂಬಿಬಿಎಸ್ ಮುಗಿಸಿ, ಕಳೆದ 7 ತಿಂಗಳ ಹಿಂದೆ ಸರ್ಕಾರಿ ಕೋಟಾದಲ್ಲಿ ಈ ಕಾಲೇಜಿಗೆ ಸೇರಿದ್ದರು.

ADVERTISEMENT

ತಂದೆಯನ್ನು ಕಳೆದುಕೊಂಡಿದ್ದ ಅವರು ಕೆಲಸದ ಒತ್ತಡ, ಜೊತೆಗೆ ಹಿರಿಯ ವೈದ್ಯರ ಕಿರಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ತನ್ನ ಬಾಲ್ಯ ಸ್ನೇಹಿತ ಶಿವಮಣಿ ಎಂಬುವರ ಬಳಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿಕೊಂಡಿದ್ದರು ಎಂಬುದು ಗೊತ್ತಾಗಿದೆ.

‘ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಹಿರಿಯ ವೈದ್ಯರ ಕಿರುಕುಳವೇ ಕಾರಣ’ ಎಂದು ವಿದ್ಯಾರ್ಥಿನಿಯ ತಮ್ಮ ಪಿ.ಪ್ರಜ್ವಲ್‌ ಸೋಮವಾರ ದೂರಿನಲ್ಲಿ ದಾಖಲಿಸಿದ್ದಾರೆ.

‘ದರ್ಶಿನಿ ದಿನದ 24 ಗಂಟೆ ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾಗಿದ್ದು, ಊಟಕ್ಕೂ ಬಿಡುತ್ತಿರಲಿಲ್ಲ. ಹಿರಿಯ ವೈದ್ಯರ ಕಿರುಕುಳದ ಬಗ್ಗೆ ತಾಯಿ ಬಳಿಯೂ ಹೇಳಿಕೊಂಡಿದ್ದಳು. ಹಿರಿಯ ವೈದ್ಯ ಡಾ.ಮಹೇಶ್ ಎಂಬಾತನ ಕಿರುಕುಳ ಹೆಚ್ಚಾಗಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆಯೂ ತಾಯಿ ಹಾಗೂ ಸ್ನೇಹಿತೆ ಜೊತೆ ತನ್ನ ಅಳಲನ್ನು ತೋಡಿಕೊಂಡಿದ್ದಳು. ಹಾಸ್ಟೆಲ್‌ಗೆ ₹ 2 ಲಕ್ಷ ಪಾವತಿಸಿದ್ದರೂ ಊಟ ಸರಿಯಾಗಿ ಕೊಡುತ್ತಿರಲಿಲ್ಲ. ವ್ಯಾಸಂಗ ತೊರೆಯಲು ಮುಂದಾದಾಗ ಆಡಳಿತ ಮಂಡಳಿಯವರು ₹ 50 ಲಕ್ಷ ಪಾವತಿಸಬೇಕೆಂದು ಷರತ್ತು ವಿಧಿಸಿದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಅಕ್ಕ ದರ್ಶಿನಿ ಕಾಲೇಜಿನಿಂದ 35 ಕಿ.ಮೀ ದೂರವಿರುವ ಕೆಂದಟ್ಟಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಆಡಳಿತ ಮಂಡಳಿ ಹಾಗೂ ಹಿರಿಯ ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿದ್ಯಾರ್ಥಿನಿಯ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.