ADVERTISEMENT

23ಕ್ಕೆ ವಿಧಾನಸೌಧಕ್ಕೆ ಪಾದಯಾತ್ರೆ: ಮೇಕೆದಾಟು ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 13:54 IST
Last Updated 18 ಸೆಪ್ಟೆಂಬರ್ 2021, 13:54 IST

ಕೋಲಾರ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಮೇಕೆದಾಟು ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಅವಳಿ ಜಿಲ್ಲೆಗೆ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಮೇಕೆದಾಟುವಿನಿಂದ ವಿಧಾನಸೌಧಕ್ಕೆ ಸೆ.23ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ನೀರಾವರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಪ್ರಕಾಶ್‌ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅವಿಭಜಿತ ಕೋಲಾರ ಜಿಲ್ಲೆಗೆ ಯಾವುದೇ ಕುಡಿಯುವ ನೀರಿನ ಮೂಲವಿಲ್ಲದೆ ಜನರು ಪರಿತಪಿಸುತ್ತಿದ್ದಾರೆ. ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸೆ.23ರಿಂದ ಸೆ.28ರವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಯ ಕೋಲಾರ, ಮಾಲೂರು, ಬಂಗಾರಪೇಟೆ ತಾಲ್ಲೂಕಿಗೆ  ಕುಡಿಯುವ ನೀರು ಪೂರೈಸುವ ಉದ್ದೇಶಕ್ಕೆ ಕೈಗೆತ್ತಿಕೊಂಡಿರುವ ಯರಗೋಳ್‌ ಯೋಜನೆಗೆ ಯಾವುದೇ ಕಾರಣಕ್ಕೂ ಕೆ.ಸಿ ವ್ಯಾಲಿ ಯೋಜನೆಯ ನೀರು ಬೆರೆಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪಾದಯಾತ್ರೆ ಮೂಲಕ 6 ಜಿಲ್ಲೆಗಳಿಗೆ ಮೇಕೆದಾಟು ಯೋಜನೆ ಮೂಲಕ ಕುಡಿಯುವ ನೀರು ಕೊಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಕೆ.ಸಿ ವ್ಯಾಲಿ ನೀರನ್ನು 3 ಹಂತದಲ್ಲಿ ಸಂಸ್ಕರಿಸಬೇಕು. ನೀರಾವರಿ ಹೋರಾಟಗಾರರ ವಿರುದ್ಧ ಈ ಹಿಂದೆ ದಾಖಲಿಸಿರುವ ಪ್ರಕರಣಗಳನ್ನು ರದ್ದುಪಡಿಸಬೇಕು’ ಎಂದು ಸಮಿತಿ ಸಂಚಾಲಕ ರಾಮುಶಿವಣ್ಣ ಆಗ್ರಹಿಸಿದರು.

ಅಂಗಡಿ ತೆರವುಗೊಳಿಸಿ: ‘ಜಿಲ್ಲಾ ಕೇಂದ್ರದಲ್ಲಿ ನನೆಗುದಿಗೆ ಬಿದ್ದಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿರುವ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ಇಟ್ಟಿರುವ ಅಂಗಡಿಗಳನ್ನು ತೆರವುಗೊಳಿಸಬೇಕು. ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ನಗರಸಭೆಯ ಖಾಲಿ ಜಾಗವನ್ನು ಬೀದಿ ಬದಿ ವ್ಯಾಪಾರಿಗಳಿಗೆ ಬಿಟ್ಟು ಕೊಡಬೇಕು’ ಎಂದು ಸಮಿತಿ ಸಂಚಾಲಕ ವೆಂಕಟೇಶ್ ಮನವಿ ಮಾಡಿದರು.

ಸಮಿತಿ ಸದಸ್ಯರಾದ ಶ್ರೀನಿವಾಸ್, ಸುಧೀರ್, ಜಿ.ನಾರಾಯಣಸ್ವಾಮಿ, ನಟರಾಜ್, ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.