ADVERTISEMENT

ನೀರಿನ ಘಟಕಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ

ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 12:51 IST
Last Updated 25 ಜೂನ್ 2018, 12:51 IST
ಕೋಲಾರದಲ್ಲಿ ಸೋಮವಾರ ನಡೆದ ಪಿಡಿಒಗಳ ಸಭೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿದರು.
ಕೋಲಾರದಲ್ಲಿ ಸೋಮವಾರ ನಡೆದ ಪಿಡಿಒಗಳ ಸಭೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿದರು.   

ಕೋಲಾರ: ‘ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಈ ಸಂಬಂಧ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುತ್ತೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಸಭೆಯಲ್ಲಿ ಮಾತನಾಡಿ, ‘ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ವಿಳಂಬ ಮಾಡಬಾರದು. ಕೊಳವೆ ಬಾವಿ ಅಥವಾ ಟ್ಯಾಂಕರ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

‘ಗ್ರಾಮದಲ್ಲಿ ಏನೇ ಸಮಸ್ಯೆ ಇದ್ದರೂ ಜನ ಕೇಳುವುದಿಲ್ಲ. ಆದರೆ, ನೀರಿನ ಕೊರತೆ ಎದುರಾದರೆ ಅಸಮಾಧಾನಗೊಳ್ಳುತ್ತಾರೆ. ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ಕೊಡಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೆನೆ. ಪಿಡಿಒಗಳು ಸಕಾಲಕ್ಕೆ ಜನರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಹೇಳಿದರು.

ADVERTISEMENT

ಸಮಸ್ಯೆ ಪಟ್ಟಿ ಮಾಡಿ: ‘ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಚರ್ಚಿಸಿ ಅಲ್ಲಿನ ಸಮಸ್ಯೆಗಳ ಪಟ್ಟಿ ಮಾಡಬೇಕು. ಸಮಸ್ಯೆ ನಿವಾರಣೆಗೆ ಕ್ರಿಯಾಯೋಜನೆ ರೂಪಿಸಿದರೆ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಅನುದಾನ ಮಂಜೂರು ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಯು ಆರ್ಥಿಕವಾಗಿ ತಾಲ್ಲೂಕಿನಲ್ಲಿ ಅತಿ ಶ್ರೀಮಂತ ಪಂಚಾಯಿತಿ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪ, ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು ಇವೆ. ಪ್ರತಿ ವರ್ಷ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿದರೆ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದು. ಪ್ರತಿ ತಿಂಗಳು ತಪ್ಪದೆ ತೆರಿಗೆ ವಸೂಲಿ ಮಾಡಿ’ ಎಂದು ಪಿಡಿಒ ಬಾಲಾಜಿ ಅವರಿಗೆ ಸೂಚಿಸಿದರು.

‘ಖಾದ್ರಿಪುರ ರೈಲ್ವೆ ಕೆಳ ಸೇತುವೆಯಲ್ಲಿ ಮಳೆ ನೀರು ನಿಂತು ಸ್ಥಳೀಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಪಂಚಾಯಿತಿ ಹಾಗೂ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಪರಸ್ಪರ ಸಬೂಬು ಹೇಳುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೀರಿ. ಇದು ಸರಿಯಿಲ್ಲ. ಪಂಚಾಯಿತಿ ಮತ್ತು ನಗರಸಭೆ ಅನುದಾನದಲ್ಲಿ ಕೆಳ ಸೇತುವೆ ದುರಸ್ತಿ ಮಾಡಬೇಕು. ನಿಮ್ಮ ಬಳಿ ಹಣವಿಲ್ಲದಿದ್ದರೆ ಹೇಳಿ, ಸ್ವಂತ ಹಣದಲ್ಲಿ ಕೆಳ ಸೇತುವೆ ದುರಸ್ತಿ ಮಾಡಿಸಿ ಜನರ ಸಂಕಷ್ಟ ಪರಿಹರಿಸುತ್ತೇನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿಗಳಿಗೆ ಅಡ್ಡಿ: ‘ಬೆಸ್ಕಾಂ ಎಂಜಿನಿಯರ್‌ಗಳು ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ಕೆಲ ಪಿಡಿಒಗಳು ಸಭೆಯಲ್ಲಿ ದೂರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೆಸ್ಕಾಂ ಅಧಿಕಾರಿಗಳು, ‘ಮನಬಂದಂತೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ನಮ್ಮಿಂದ ತಪ್ಪಾಗಿರುವ ಬಗ್ಗೆ ತಿಳಿಸಿದರೆ ಅದನ್ನು ಸರಿಪಡಿಸುತ್ತೇವೆ. ಅದು ಬಿಟ್ಟು ಈ ರೀತಿ ಸಭೆಗಳಲ್ಲಿ ದೂರು ಹೇಳುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಆಗ ಮಧ್ಯಪ್ರವೇಶಿಸಿದ ಶಾಸಕರು, ‘ಇಷ್ಟು ದಿನ ಹೇಗೆ, ಯಾರ ಒತ್ತಡಕ್ಕೆ ಮಣಿದು ಕೆಲಸ ಮಾಡಿದ್ದೀರಿ ಎಂಬುದನ್ನು ನಾನು ಕೇಳುವುದಿಲ್ಲ. ಮುಂದೆ ಇಂತಹ ದೂರು ಬರಬಾರದು. ಏನಾದರೂ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ, ಬಗೆಹರಿಸುತ್ತೇನೆ. ಅದು ಬಿಟ್ಟು ನಿಮ್ಮದೇ ದಾರಿಯಲ್ಲಿ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಉಪಾಧ್ಯಕ್ಷೆ ಲಕ್ಷ್ಮಿ, ಕಾರ್ಯ ನಿರ್ವಹಣಾಧಿಕಾರಿ ಚಂದ್ರಪ್ಪ ಹಾಜರಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಮೂಲಸೌಕರ್ಯ ಒದಗಿಸದಿರುವುದು ತಲೆ ತಗ್ಗಿಸುವ ವಿಚಾರ. ಸರ್ಕಾರ ಹಲವು ಸೌಲಭ್ಯ ನೀಡಿದ್ದರೂ ಅವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸದಿರುವುದು ಅಧಿಕಾರಿಗಳ ಬೇಜವಾಬ್ದಾರಿಯ ಪರಮಾವಧಿ.
ಕೆ.ಶ್ರೀನಿವಾಸಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.