ADVERTISEMENT

ಹಾಲು ಖರೀದಿ ದರ ಕಡಿತ: ಪ್ರತಿಭಟನೆ

ಕೋಚಿಮುಲ್‌ ವಿರುದ್ಧ ಕೆಪಿಆರ್‌ಎಸ್‌ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 14:21 IST
Last Updated 12 ನವೆಂಬರ್ 2021, 14:21 IST
ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ಕೆಪಿಆರ್‌ಎಸ್‌ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಕೋಚಿಮುಲ್‌ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿದರು
ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ಕೆಪಿಆರ್‌ಎಸ್‌ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಕೋಚಿಮುಲ್‌ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿದರು   

ಕೋಲಾರ: ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಸದಸ್ಯರು ಇಲ್ಲಿ ಶುಕ್ರವಾರ ಕೋಚಿಮುಲ್‌ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಬರ ಪರಿಸ್ಥಿತಿ ನಡುವೆಯೂ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೈನೋದ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಕೋವಿಡ್‌–19 ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಚಿಮುಲ್‌ ಹಾಲು ಖರೀದಿ ದರವನ್ನು ಲೀಟರ್‌ಗೆ ₹ 1.50 ಕಡಿಮೆ ಮಾಡಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೈನೋದ್ಯಮವು ರೈತರ ಬೆನ್ನೆಲುಬು. ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ಪೂರೈಸುತ್ತಿದ್ದಾರೆ. ಆದರೆ, ಒಕ್ಕೂಟದ ಆಡಳಿತ ಮಂಡಳಿಯು ನಷ್ಟದ ಸಬೂಬು ಹೇಳಿ ಹಾಲು ಖರೀದಿ ದರ ಕಡಿತಗೊಳಿಸಿದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕೋಚಿಮುಲ್‌ ವ್ಯಾಪ್ತಿಯ 1,900ಕ್ಕೂ ಹೆಚ್ಚು ಹಾಲು ಉತ್ಪಾದಕರು ಪ್ರತಿನಿತ್ಯ ಸುಮಾರು 10 ಲಕ್ಷ ಲೀಟರ್‌ ಉತ್ಪಾದಿಸುತ್ತಿದ್ದಾರೆ. ಮೇವಿನ ಕೊರತೆ ಮತ್ತು ಪಶು ಆಹಾರದ ಬೆಲೆ ಹೆಚ್ಚಳದ ನಡುವೆ ಜಾನುವಾರುಗಳನ್ನು ನಿರ್ವಹಣೆ ಮಾಡುವುದು ದೊಡ್ಡ ಸವಾಲಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಹಾಲು ಖರೀದಿ ಕಡಿಮೆ ಮಾಡಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

‘ಪಶು ಆಹಾರ ಹಾಗೂ ಮೇವಿನ ಬೆಲೆ ಗಗನಕ್ಕೇರಿದೆ. ಒಂದು ಲೀಟರ್ ಹಾಲು ಉತ್ಪಾದನೆಗೆ ಅಂದಾಜು ₹ 35 ವೆಚ್ಚವಾಗುತ್ತಿದೆ. ಆದರೆ, ಒಕ್ಕೂಟವು ಉತ್ಪಾದನಾ ವೆಚ್ಚಕಿಂತಲೂ ಕಡಿಮೆ ದರಕ್ಕೆ ಹಾಲು ಖರೀದಿಸಿ ರೈತರನ್ನು ಶೋಷಿಸುತ್ತಿದೆ. ಘನ ಕೊಬ್ಬಿನ ಅಂಶ (ಎಸ್‌ಎನ್‌ಎಫ್‌) ಆಧರಿಸಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಕೊಡುತ್ತಿಲ್ಲ’ ಎಂದು ದೂರಿದರು.

ನೈತಿಕತೆಯಿಲ್ಲ: ‘ಆಳುವ ಸರ್ಕಾರಗಳು ಶ್ರೀಮಂತ ವರ್ಗದ ಪರವಾಗಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈನುಗಾರಿಕೆ ನಂಬಿ ಬದುಕುತ್ತಿರುವ ‌ಕೃಷಿ ಕೂಲಿಕಾರರು ಹಾಗೂ ರೈತರ ಗೋಳು ಹೇಳತೀರದು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸದೆ ಹಾಲು ಖರೀದಿ ದರ ಮಾಡುತ್ತಿರುವ ಸರ್ಕಾರಗಳಿಗೆ ನೈತಿಕತೆಯಿಲ್ಲ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಹಾಲಿನ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಸಾಧ್ಯವಾಗದ ಕೆಎಂಎಫ್ ಮತ್ತು ಕೋಚಿಮಲ್ ಆಡಳಿತ ಮಂಡಳಿಯು ದುಂಡು ವೆಚ್ಚಕ್ಕೆ ಕಡಿವಾಣ ಹಾಕದೆ ಹಾಲು ಖರೀದಿ ದರ ಕಡಿಮೆ ಮಾಡಿದೆ. ಈ ಹಿಂದೆಯೂ ಲಾಕ್‌ಡೌನ್‌ ಹಾಗೂ ಮಾರುಕಟ್ಟೆಯ ನೆಪದಲ್ಲಿ ದರ ಕಡಿತಗೊಳಿಸಲಾಗಿತ್ತು. ಸರ್ಕಾರಗಳಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಆರೋಪಿಸಿದರು.

‘ದರ ಕಡಿತದ ಆದೇಶ ಹಿಂಪಡೆಯಬೇಕು. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಮತ್ತು ಖರೀದಿಗೆ ಸಬ್ಸಿಡಿ ನೀಡಬೇಕು. ರಾಜ್ಯದೆಲ್ಲೆಡೆ ಎಲ್ಲಾ ಒಕ್ಕೂಟಗಳಲ್ಲೂ ಹಾಲಿಗೆ ಏಕರೂಪ ಖರೀದಿ ದರ ನಿಗದಿಪಡಿಸಬೇಕು. ಹಾಲು ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಖರೀದಿ ದರ ಹೆಚ್ಚಿಸಬೇಕು. ಒಕ್ಕೂಟದಲ್ಲಿನ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಕೆಪಿಆರ್‌ಎಸ್ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್‌.ಶ್ರೀರಾಮ್, ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್‌ಕುಮಾರ್‌ ಸದಸ್ಯರಾದ ಶಂಕರ್, ವೆಂಕಟೇಶ್, ಶ್ರೀಧರ್, ಅಪ್ಪಯ್ಯಣ್ಣ, ವೆಂಕಟೇಶಪ್ಪ, ಮಂಜುನಾಥ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.