ADVERTISEMENT

ಕೋಲಾರ: ಹಾಲು ಖರೀದಿ ದರ ಕಡಿತ; ಪ್ರತಿಭಟನೆ

ಕೋಚಿಮುಲ್‌ ವಿರುದ್ಧ ರೈತ ಸಂಘ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 15:44 IST
Last Updated 8 ನವೆಂಬರ್ 2021, 15:44 IST
ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ರೈತ ಸಂಘ ಸದಸ್ಯರು ಕೋಲಾರದಲ್ಲಿ ಸೋಮವಾರ ಕೋಚಿಮುಲ್‌ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿದರು
ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ರೈತ ಸಂಘ ಸದಸ್ಯರು ಕೋಲಾರದಲ್ಲಿ ಸೋಮವಾರ ಕೋಚಿಮುಲ್‌ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿದರು   

ಕೋಲಾರ: ಹಾಲು ಖರೀದಿ ದರ ಕಡಿತಗೊಳಿಸಿರುವ ಕ್ರಮ ಖಂಡಿಸಿ ರೈತ ಸಂಘ ಸದಸ್ಯರು ಇಲ್ಲಿ ಸೋಮವಾರ ಕೋಚಿಮುಲ್‌ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಬರ ಪರಿಸ್ಥಿತಿ ನಡುವೆಯೂ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೈನೋದ್ಯಮ ನಿರ್ವಹಣೆ ಮಾಡುತ್ತಿದ್ದಾರೆ. ಕೋವಿಡ್‌–19 ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಚಿಮುಲ್‌ ಹಾಲು ಖರೀದಿ ದರವನ್ನು ಲೀಟರ್‌ಗೆ ₹ 1.50 ಕಡಿಮೆ ಮಾಡಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೈನೋದ್ಯಮವು ರೈತರ ಬೆನ್ನೆಲುಬು. ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ಪೂರೈಸುತ್ತಿದ್ದಾರೆ. ಆದರೆ, ಒಕ್ಕೂಟದ ಆಡಳಿತ ಮಂಡಳಿಯು ನಷ್ಟದ ಸಬೂಬು ಹೇಳಿ ಹಾಲು ಖರೀದಿ ದರ ಕಡಿತಗೊಳಿಸಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಪಶು ಆಹಾರ ಹಾಗೂ ಮೇವಿನ ಬೆಲೆ ಗಗನಕ್ಕೇರಿದೆ. ಒಂದು ಲೀಟರ್ ಹಾಲು ಉತ್ಪಾದನೆಗೆ ಅಂದಾಜು ₹ 35 ವೆಚ್ಚವಾಗುತ್ತಿದೆ. ಆದರೆ, ಒಕ್ಕೂಟವು ಉತ್ಪಾದನಾ ವೆಚ್ಚಕಿಂತಲೂ ಕಡಿಮೆ ದರಕ್ಕೆ ಹಾಲು ಖರೀದಿಸಿ ರೈತರನ್ನು ಶೋಷಿಸುತ್ತಿದೆ. ಘನ ಕೊಬ್ಬಿನ ಅಂಶ (ಎಸ್‌ಎನ್‌ಎಫ್‌) ಆಧರಿಸಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಕೊಡುತ್ತಿಲ್ಲ’ ಎಂದು ಕಿಡಿಕಾರಿದರು.

ಕಾಳಜಿಯಿಲ್ಲ: ‘ದೇಶದ ಸಂಪತ್ತು ಲೂಟಿ ಮಾಡುವ ಲೂಟಿಕೋರರನ್ನು ಸರ್ಕಾರಗಳು ರಕ್ಷಿಸುತ್ತವೆ. ಆದರೆ, ದೇಶಕ್ಕೆ ಆರ್ಥಿಕ ಸಂಪನ್ಮೂಲ ಕಲ್ಪಿಸುವ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದರೂ ಸರ್ಕಾರಗಳು ನೆರವಿಗೆ ಧಾವಿಸುವುದಿಲ್ಲ. ಸರ್ಕಾರಗಳಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ದರ ಕಡಿತದ ಆದೇಶ ಹಿಂಪಡೆಯಬೇಕು. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಮತ್ತು ಖರೀದಿಗೆ ಸಬ್ಸಿಡಿ ನೀಡಬೇಕು. ರಾಜ್ಯದೆಲ್ಲೆಡೆ ಎಲ್ಲಾ ಒಕ್ಕೂಟಗಳಲ್ಲೂ ಹಾಲಿಗೆ ಏಕರೂಪ ಖರೀದಿ ದರ ನಿಗದಿಪಡಿಸಬೇಕು. ಹಾಲು ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಖರೀದಿ ದರ ಹೆಚ್ಚಿಸಬೇಕು. ಒಕ್ಕೂಟದಲ್ಲಿನ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ರಾಸುಗಳ ಸಮೇತ ಹೆದ್ದಾರಿ ತಡೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್‌, ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವೇಣು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.