ADVERTISEMENT

ರಾಗಿ ಮೊಳಕೆ: ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 6:09 IST
Last Updated 25 ನವೆಂಬರ್ 2021, 6:09 IST
ಕೆಜಿಎಫ್ ಸಮೀಪದ ಬೆನ್ನವಾರ ಗ್ರಾಮದ ಬಳಿ ಮಳೆಯ ನೀರಿನಲ್ಲಿ ಮುಳುಗಿರುವ ರಾಗಿ ಬೆಳೆ
ಕೆಜಿಎಫ್ ಸಮೀಪದ ಬೆನ್ನವಾರ ಗ್ರಾಮದ ಬಳಿ ಮಳೆಯ ನೀರಿನಲ್ಲಿ ಮುಳುಗಿರುವ ರಾಗಿ ಬೆಳೆ   

ಕೆಜಿಎಫ್‌: ಜಡಿ ಮಳೆ ಮೊದಲೇ ಕಟಾವು ಮಾಡಿದ್ದ ರಾಗಿಯ ತೆನೆಯಲ್ಲಿ ಮೊಳಕೆ ಬರುತ್ತಿರುವುದು ರೈತರಲ್ಲಿ ಆತಂಕವನ್ನು ಉಂಟು ಮಾಡಿದೆ.

ಕಟಾವು ಮಾಡದೆ ಉಳಿದಿರುವ ರಾಗಿ ಬೆಳೆ ಪೈಕಿ ಶೇ 80ರಷ್ಟು ನಷ್ಟ ಅನುಭವಿಸಿರುವ ರೈತರು ತಾವು ಸಂಗ್ರಹಿಸಿದ್ದ ರಾಗಿ ಕೂಡ ಹಾಳಾಗುವ ಸ್ಥಿತಿಗೆ ಬಂದಿರುವುದು ಅವರ ಕಣ್ಣಲ್ಲಿ ನೀರು ಬರಿಸುತ್ತಿದೆ.

ಸತತ ಮಳೆ ನಂತರ ಸೋಮವಾರದಿಂದ ಬರುತ್ತಿದ್ದ ಬಿಸಿಲು ಬುಧವಾರ ಸಂಜೆ ವೇಳೆಗೆ ಮಾಯವಾಗಿ, ತಾಲ್ಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗಿರುವುದು, ಗಾಯದ ಮೇಲೆ ಮತ್ತೊಂದು ಬರೆ ಎರೆದಂತಾಗಿದೆ. ಮಳೆ ಬಿಟ್ಟು ಬಿಸಿಲು ಬರುತ್ತಿದೆ ಎಂಬ ಕಾರಣದಿಂದಾಗಿ ಹೊಲಗಳಿಗೆ ಧಾವಿಸಿದ ರೈತರು ನೆಲಕ್ಕೆ ಬಾಗಿದ ಪೈರುಗಳಲ್ಲಿದ್ದ ರಾಗಿ ತೆನೆಯನ್ನು ಕೊಯ್ಯುವ ಸಾಹಸ ಮಾಡಿದ್ದಾರೆ. ಆದರೆ ಬಹುತೇಕ ರಾಗಿ ತೆನೆಗಳು ನೆಲಕ್ಕೆ ಬಿದ್ದು ಹಾಳಾಗಿವೆ.

ADVERTISEMENT

‘ಮಳೆಯನ್ನು ತಡೆದುಕೊಂಡು ನೆಲಕ್ಕೆ ಬಾಗದೆ ನಿಂತಿರುವ ರಾಗಿ ಪೈರುಗಳ ಬೆಳೆ ಮಾತ್ರ ಕೈಗೆ ಸಿಗಲಿದೆ. ತೇವಾಂಶ ಮುಂದುವರೆದರೆ, ಆ ಬೆಳೆ ಕೂಡ ಕೈ ಕಚ್ಚುತ್ತದೆ’ ಎಂದು ಕೃಷಿ ಅಧಿಕಾರಿಗಳು ಅಭಿಪ್ರಾಯಪಟ್ಟರು.

ತಾಲ್ಲೂಕಿನಲ್ಲಿ ಈಗಾಗಲೇ ಶೇ 80ರಷ್ಟು ರಾಗಿ ಬೆಳೆ ನಷ್ಟವಾಗಿದೆ. ಶೇ 20ರಷ್ಟು ಇನ್ನೂ ಕಟಾವು ಆಗಬೇಕಾಗಿದೆ. ಆದರೆ ತೊಗರಿ ಮತ್ತು ಅವರೆ ಮಳೆಯಿಂದ ಹಾನಿ ಅನುಭವಿಸಿಲ್ಲ. ತೊಗರಿ ಕಾಯಿ ಕಟ್ಟುವ ಸ್ಥಿತಿಯಲ್ಲಿದೆ. ಕೆಲವೆಡೆ ಹುರುಳಿ ಕೂಡ ಬಿತ್ತನೆಯಾಗಿದ್ದು, ಅದಕ್ಕೆ ಕೂಡ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

‘ಒಂದು ಹೆಕ್ಟೇರ್‌ ಜಮೀನಿಗೆ ಸರ್ಕಾರದಿಂದ ₹6,800 ರೂಪಾಯಿ ಪರಿಹಾರ ದೊರಕುತ್ತದೆ. ಇದು ಏನಕ್ಕೂ ಸಾಕಾಗುವುದಿಲ್ಲ. ಕೆರೆ ಕೋಡಿ ಹೋಗುವ ಪ್ರದೇಶ ಮತ್ತು ತಗ್ಗು ಪ್ರದೇಶಗಳ ಜಮೀನಿನಲ್ಲಿ ಇನ್ನೂ ನೀರು ನಿಂತಿದೆ. ಅಲ್ಲಿ ಕೊಯ್ಲು ಕೂಡ ಮಾಡಲು ಆಗುವುದಿಲ್ಲ. ಸಂಗ್ರಹಿಸಿರುವ ರಾಗಿ ತೇವಾಂಶ ಹೆಚ್ಚಾಗಿ ಫಂಗಸ್‌ (ಬೂಜು) ಬಂದಿದೆ’ ಎಂದು ರೈತರು ಅವಲತ್ತುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.