ADVERTISEMENT

ನೀರಿನ ಸಮಸ್ಯೆಯ ವರದಿ ನೀಡದ ಅಧಿಕಾರಿಗಳು: ಕೃಷ್ಣ ಬೈರೇಗೌಡ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 13:23 IST
Last Updated 31 ಜನವರಿ 2019, 13:23 IST
ಕೋಲಾರದಲ್ಲಿ ಗುರುವಾರ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು.
ಕೋಲಾರದಲ್ಲಿ ಗುರುವಾರ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು.   

ಕೋಲಾರ: ನೀರಿನ ಸಮಸ್ಯೆ ಸಂಬಂಧ ವರದಿ ನೀಡದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.

ಇಲ್ಲಿ ಗುರುವಾರ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಮಾತನಾಡಿದ ಸಚಿವರು, ‘ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆ ಆಲಿಸಿ ಸಮಗ್ರ ವರದಿ ನೀಡುವಂತೆ ಹಿಂದಿನ ಸಭೆಯಲ್ಲಿ ಸೂಚಿಸಿದ್ದೆ. ಆದರೆ, ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳತ್ತ ತಿರುಗಿಯೂ ನೋಡಿಲ್ಲ’ ಎಂದು ಕೆಂಡಾಮಂಡಲರಾದರು.

‘ಜಿಲ್ಲೆಯಲ್ಲಿ ಈವರೆಗೆ 10 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 7 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಹಾಗೂ 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಪ್ರಭಾರ) ಕಾರ್ಯ ನಿರ್ವಾಹಕ ಎಂಜಿನಿಯರ್‌ ಗುಳ್ಳಪ್ಪನವರ್‌ ಹೇಳಿದರು.

ADVERTISEMENT

ಆಗ ಸಚಿವರು, ‘ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಮಾಹಿತಿ ಸಂಗ್ರಹಿಸಿ ವರದಿ ನೀಡುವುದಲ್ಲ. ಖುದ್ದು ಗ್ರಾಮಗಳಿಗೆ ತೆರಳಿ ನೀರಿನ ಸಮಸ್ಯೆ ಸಂಬಂಧ ಸ್ಥಳೀಯರ ಅಹವಾಲು ಆಲಿಸಿ ವರದಿ ನೀಡಬೇಕು. ನಾನು ಒಂದು ಕೇಳಿದರೆ ನೀವು ಇನ್ನೊಂದು ಹೇಳುತ್ತಿದ್ದೀರಿ. ಹಳೆ ಕತೆ ಹೇಳಬೇಡಿ. ನನಗೆ ಗಿಳಿಪಾಠ ಒಪ್ಪಿಸಬೇಡಿ’ ಎಂದು ತಾಕೀತು ಮಾಡಿದರು.

‘ಅಧಿಕಾರಿಗಳು ಪರಿಸ್ಥಿತಿ ಅರಿತು ಕಚೇರಿಯಿಂದ ಹೊರ ಹೋಗಿ ಕೆಲಸ ಮಾಡಿ. ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಈ ಬಗ್ಗೆ ಅಧಿಕಾರಿಗಳಿಗೆ ಅರಿವು ಮೂಡಿಸಬೇಕು. ಇವರು ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಸ್ಯೆ ಸಾಧ್ಯತೆ: ‘ಜಿಲ್ಲೆಯಲ್ಲಿ ಬೇಸಿಗೆ ವೇಳೆಗೆ 168 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ರೈತರ ಕೊಳವೆ ಬಾವಿ ಬಾಡಿಗೆಗೆ ಪಡೆಯಲು ಪ್ರಯತ್ನಿಸಲಾಗುತ್ತಿದೆ' ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

‘ಮುಂಗಾರು ಹಂಗಾಮಿನಲ್ಲಿ 71,063 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಪೈಕಿ 2,675 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಬೆಳೆ ಪರಿಹಾರಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಾರ್ಯಪಡೆ ಅನುದಾನವನ್ನು ನೀರಿನ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರೈತರಿಗೆ 17 ಸಾವಿರಕ್ಕೂ ಹೆಚ್ಚು ಮೇವಿನ ಮಿನಿ ಕಿಟ್ ವಿತರಿಸಲಾಗಿದೆ. ಮೇವು ಬೆಳೆದಿರುವ ಬಗ್ಗೆ ಬರ ನಿರ್ವಹಣಾ ನೋಡಲ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 13 ವಾರಕ್ಕೆ ಮೇವು ಲಭ್ಯವಿದೆ. ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಭರ್ತಿಯಾಗಿರುವ ಕೆರೆಗಳ ಸುತ್ತಮುತ್ತ ಹೆಚ್ಚು ಮೇವು ಬೆಳೆಸಲಾಗುತ್ತಿದೆ’ ಎಂದರು.

ತಾರತಮ್ಯ: ‘ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಬರ ಪರಿಹಾರ ಕಾಮಗಾರಿಗಾಗಿ ತಲಾ ₹ 30 ಲಕ್ಷ ಬಿಡುಗಡೆ ಮಾಡಲಾಗಿದೆ. ಆದರೆ, ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕಿಗೆ ₹ 30 ಲಕ್ಷ ಮಾತ್ರ ನೀಡಲಾಗಿದೆ. ಏಕೆ ಈ ತಾರತಮ್ಯ?’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಯಾವುದೇ ತಾರತಮ್ಯ ಮಾಡಿಲ್ಲ. ಮಾತನಾಡುವ ಮೊದಲು ಪದ ಬಳಕೆ ಸರಿ ಇರಬೇಕು. ಕಂದಾಯ ಇಲಾಖೆಯಿಂದ ಕೆಜಿಎಫ್‌ ತಾಲ್ಲೂಕಾಗಿ ವಿಂಗಡಣೆ ಮಾಡಿಲ್ಲ. ಇದರಿಂದ ಅನುದಾನ ಹಂಚಿಕೆಗೆ ಸಮಸ್ಯೆಯಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ದರ ಹೆಚ್ಚಿಸಬೇಕು: ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಒಂದು ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಕೊಳವೆ ಬಾವಿ ಆಳ ಮತ್ತು ದರ ಹೆಚ್ಚಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮನವಿ ಮಾಡಿದರು.

‘14ನೇ ಹಣಕಾಸು ಯೋಜನೆಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಅನಗತ್ಯ ಕಾಮಗಾರಿ ನಡೆಸದೆ ನೀರಿನ ಸಮಸ್ಯೆಗೆ ಹೆಚ್ಚು ಒತ್ತು ನೀಡಬೇಕು’ ಎಂದು ಶಾಸಕ ಕೆ.ವೈ.ನಂಜೇಗೌಡ ಸಲಹೆ ನೀಡಿದರು.

‘ಹೊಸದಾಗಿ ದರ ಹೆಚ್ಚಿಸಿದರೆ ಬಾಕಿ ಇರುವ ಕೊಳವೆ ಬಾವಿಗಳ ದರವನ್ನೂ ಹೆಚ್ಚಳ ಮಾಡಬೇಕಾಗುತ್ತದೆ. ಇದರಿಂದ ಸಾಕಷ್ಟು ಅವ್ಯವಹಾರ ನಡೆಯುತ್ತದೆ. ಸದ್ಯಕ್ಕೆ ಪರಿಹಾರವಾಗಬೇಕಾದ ಸಮಸ್ಯೆಯತ್ತ ಗಮನ ಹರಿಸೋಣ’ ಎಂದು ಸಚಿವರು ಹೇಳಿದರು.

‘ಕೆ.ಸಿ ವ್ಯಾಲಿ ಯೋಜನೆ ಫಲವಾಗಿ ಬೆಂಗಳೂರಿನಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬರುತ್ತಿತ್ತು. ಆದರೆ, ಕೆಲ ವ್ಯಕ್ತಿಗಳು ರೈತರ ಹೆಸರಿನಲ್ಲಿ ಯೋಜನೆಗೆ ಕಲ್ಲು ಹಾಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನುದಾನದ ಕೊರತೆಯಿಲ್ಲ: ‘ನೀರಿನ ಸಮಸ್ಯೆ ನಿವಾರಣೆಗೆ ಅನುದಾನದ ಕೊರತೆಯಿಲ್ಲ. ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಶುದ್ಧ ನೀರಿನ ಘಟಕಗಳಿಗೆ ಬೇಡಿಕೆಯಿದೆ. ಈವರೆಗೆ 1,110 ನೀರು ಶುದ್ಧೀಕರಣ ಘಟಕಗಳಿಗೆ ಅನುಮೋದನೆ ನೀಡಿದ್ದು, 1,073 ಸ್ಥಾಪನೆಯಾಗಿವೆ. 37 ಘಟಕಗಳು ಬಾಕಿಯಿದ್ದು, 1,068 ಕಾರ್ಯ ನಿರ್ವಹಿಸುತ್ತಿವೆ’ ಎಂದು ಜಿ.ಪಂ ಸಿಇಒ ಜಿ.ಜಗದೀಶ್ ವಿವರಿಸಿದರು.

‘ನೀರು ಬತ್ತಿರುವ 760 ಕೊಳವೆ ಬಾವಿಗಳ ಪಂಪ್‌ ಮೋಟರ್‌ ಉಳಿಕೆಯಾಗಿದ್ದು, ಈ ಪೈಕಿ 400ಕ್ಕೂ ಹೆಚ್ಚು ಪಂಪ್‌ ಮೋಟರ್‌ಗಳನ್ನು ಮರು ಬಳಕೆ ಮಾಡಿಕೊಳ್ಳಬಹುದು’ ಎಂದು ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತಿಳಿಸಿದರು.

‘ಹೊಸ ಕೊಳವೆ ಬಾವಿಗೆ ಪಂಪ್‌ ಮೋಟರ್‌ ಖರೀದಿ ಮಾಡಬಾರದು. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಹಳೆ ಪಂಪ್‌ ಮೋಟರ್‌ ಬಳಸಬೇಕು. ಜತೆಗೆ ಹಳೆ ವಿದ್ಯುತ್ ಸಲಕರಣೆಗಳನ್ನೇ ಉಪಯೋಗಿಸಬೇಕು’ ಎಂದು ಸಚಿವರು ಸೂಚಿಸಿದರು.

ಜಿ.ಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಶಾಸಕಿ ಎಂ.ರೂಪಕಲಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ಕುಮಾರ್, ಉಪ ವಿಭಾಗಾಧಿಕಾರಿ ಕೆ.ಸುಭಾ ಕಲ್ಯಾಣ್, ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ ಹಾಜರಿದ್ದರು.

ಅಂಕಿ ಅಂಶ.....
* 10 ಗ್ರಾಮದಲ್ಲಿ ನೀರಿನ ಸಮಸ್ಯೆ
* 71,063 ಹೆಕ್ಟೇರ್‌ನಲ್ಲಿ ಬಿತ್ತನೆ
* 2,675 ಹೆಕ್ಟೇರ್ ಬೆಳೆ ಹಾನಿ
* 13 ವಾರಕ್ಕೆ ಮೇವು ಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.