ಕೋಲಾರ: ತಾಲ್ಲೂಕಿನ ಚೌಡದೇನಹಳ್ಳಿಯಲ್ಲಿ ಆಯೋಜಿಸಿರುವ ಊರಹಬ್ಬ ಹಾಗೂ ದೊಡ್ಡದ್ಯಾವರ ಮಹೋತ್ಸವದ ಮೂರನೇ ದಿನವಾದ ಭಾನುವಾರ ವಿವಿಧ ದೇವರುಗಳಿಗೆ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕುಟುಂಬದೊಂದಿಗೆ ಆಗಮಿಸಿದ ಇದೇ ಗ್ರಾಮದವರಾದ ಕಂದಾಯ ಸಚಿವ ಕೃಷ್ಣಬೈರೇಗೌಡರು ಪೂಜಾ ಕಾರ್ಯದಲ್ಲಿ ಭಾಗಿಯಾದರು. ನಂತರ ಬೆಂಬಲಿಗರು ಹಾಗೂ ಯುವಕರ ಒತ್ತಾಯದ ಮೇರೆಗೆ ತಮಟೆ ಹೊಡೆದು ಡೊಳ್ಳು ಬಾರಿಸಿದರು. ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಸಚಿವರು ಸಹ ತಮಟೆ ಹೊಡೆತಕ್ಕೆ ಹೆಜ್ಜೆ ಹಾಕಿದ್ದು ನೋಡುಗರಿಗೆ ಖುಷಿ ತರಿಸಿತು.
ಕರಗದಮ್ಮ, ಮಾರೆಮ್ಮ, ನಲ್ಲಗಂಗಮ್ಮ, ಸಪ್ಪಲಮ್ಮ, ಸಪ್ತಮಾತೃಕೆ ದೇವಿಯರಿಗೆ ದೀಪೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಹಾಗೂ ಸುತ್ತಲಿನ ಮುಖಂಡರು ಭಾಗವಹಿಸಿದ್ದರು.
ಸೋಮವಾರ ಬೆಳಿಗ್ಗೆ 9.30ಕ್ಕೆ ಕೃಷ್ಣಬೈರೇಗೌಡರು ಉಟ್ಲುಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12ಕ್ಕೆ ಸಾವಿತ್ರಮ್ಮ ಸಿ.ಬೈರೇಗೌಡ ಕುಟುಂಬದವರಿಂದ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.30ಕ್ಕೆ ವೇಣುಗೋಪಾಲಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಕುರುಕ್ಷೇತ್ರ ಅಥವಾ ಶ್ರೀಕೃಷ್ಣ ಸಂಧಾನ ನಾಟಕ ಆಯೋಜಿಸಲಾಗಿದೆ.
ಈ ಹಿಂದೆ 1996ರ ಏ.25ರಿಂದ ಮೇ 1ರವರೆಗೆ ಗಂಗದ್ಯಾವರ ಜಾತ್ರೆಯು ನಡೆಸಲಾಗಿತ್ತು. ಈ ಬಾರಿ ಏ.18ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.