ಕೋಲಾರ: ‘ಮತಗಳ್ಳತನ ವಿಚಾರದಲ್ಲಿ ಕೆ.ಎನ್.ರಾಜಣ್ಣ ಮಾತಿನಲ್ಲಿ ಸತ್ಯವಿದ್ದರೂ ಆ ರೀತಿ ಅವರು ಹೇಳಬಾರದಿತ್ತು. ನಮ್ಮ ನಾಯಕರು ಒಂದು ವಿಚಾರದಲ್ಲಿ ನಿಲುವು ತೆಗೆದುಕೊಂಡಾಗ ಅದಕ್ಕೆ ಬದ್ಧವಾಗಿರಬೇಕು, ಇಲ್ಲವೇ ದೂರ ಇರಬೇಕು’ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ತಾಲ್ಲೂಕಿನ ವೇಮಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಹಕಾರ ಸಚಿವರಾಗಿದ್ದ ರಾಜಣ್ಣ ಅವರನ್ನು ಯಾವ ಕಾರಣಕ್ಕೆ ಸಚಿವ ಸಂಪುಟದಿಂದ ತೆಗೆದು ಹಾಕಲಾಗಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅವರಂಥ ನಾಯಕರನ್ನು ಸಚಿವ ಸಂಪುಟದಿಂದ ತೆಗೆಯಬಾರದಿತ್ತು ಎಂಬುದು ನನ್ನ ಅಭಿಪ್ರಾಯ. ಆ ಬಗ್ಗೆ ನನಗೂ ಬೇಸರವಿದೆ. ತಪ್ಪೇ ಮಾಡಿದ್ದರೂ ಕರೆದು ಮಾತನಾಡಿಸಿ ಬುದ್ಧಿವಾದ ಹೇಳಿ ಸರಿಪಡಿಸುವ ಪ್ರಯತ್ನ ಮಾಡಬಹುದಿತ್ತು. ತಾಯಿ ಹಾಲು ಕುಡಿಯುವಾಗ ಮಗು ಒಮ್ಮೊಮ್ಮೆ ಕಚ್ಚುತ್ತದೆ, ಹಾಗಂತ ಮಗುವಿಗೆ ಹೊಡೆಯುವುದು ಸರಿ ಅಲ್ಲ’ ಎಂದರು.
‘ರಾಜಣ್ಣ ಪರಿಶಿಷ್ಟ ಪಂಗಡದ ಹಿರಿಯ ನಾಯಕರಾಗಿದ್ದು, ಮಧುಗಿರಿಯಂಥ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅದು ಸುಲಭದ ಮಾತಲ್ಲ. ನಾನು ಕೂಡ ಕೋಲಾರ ಸಾಮಾನ್ಯ ಕ್ಷೇತ್ರಕ್ಕೆ ಬಂದು ಗೆದ್ದಿದ್ದು ಅಷ್ಟೇನೂ ಸುಲಭವಾಗಿರಲಿಲ್ಲ. ಜನರ ಪ್ರೀತಿ ವಿಶ್ವಾಸವಿದ್ದಾಗ ಮಾತ್ರ ಗೆಲ್ಲಬಹುದು’ ಎಂದು ತಿಳಿಸಿದರು.
‘ಮತಗಳ್ಳತನ ನಡೆದಿರುವುದು ನಿಜ. ಒಬ್ಬೊಬ್ಬರು ನಾಲ್ಕೈದು ಕಡೆ ಮತ ಇಟ್ಟುಕೊಳ್ಳುವುದು ಎಷ್ಟು ಸರಿ? ಬಿಜೆಪಿಗೆ ಮತ ಹಾಕಲು ಈ ರೀತಿ ಮಾಡಲಾಗುತ್ತಿದೆ. ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲಿ ಈ ರೀತಿ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಈ ಬಗ್ಗೆ ದಾಖಲೆ ಸಂಗ್ರಹಿಸಿದ್ದಾರೆ’ ಎಂದರು.
‘ಕೋಲಾರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ದೊಡ್ಡವಲ್ಲಭಿ, ನರಸಾಪುರ, ವೇಮಗಲ್ ಸೇರಿದಂತೆ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಗ್ಯಾರಂಟಿಗಳನ್ನು ನೀಡಿದ್ದೇವೆ. ಇನ್ನೂ ಮೂರು ವರ್ಷ ಅಧಿಕಾರದಲ್ಲಿ ಇರುತ್ತೇವೆ. ಕೆಲಸ ಮಾಡಿದ್ದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಮತ ಹಾಕಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.