ಕಾರಟಗಿ: ಪಟ್ಟಣದ ವಾರ್ಡ ನಂ.1 ಮತ್ತು ಹಾಗೂ 2ರ ನಿವಾಸಿಗಳು ಸರ್ವೇ ನಂ. 1ರ ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಗುರುವಾರ ಹಕ್ಕುಪತ್ರಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ‘ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಕ್ಕು ಪತ್ರ ವಿತರಣೆಯಲ್ಲಿಯ ತೊಡಕುಗಳನ್ನು ನಮ್ಮ ಸರ್ಕಾರ ನಿವಾರಿಸಿದ್ದರಿಂದ ಹಕ್ಕುಪತ್ರ ವಿತರಣೆ ಸಾಧ್ಯವಾಗಿದೆ. ಫಲಾನುಭವಿಗಳ ಹಿತರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಫಲವಾಗಿ ಹಕ್ಕುಪತ್ರ ದೊರಕಿದೆ. ಇನ್ನು 31ನೇ ವಿತರಣಾ ನಾಲೆ, ರಾಜ್ಯ ಹೆದ್ದಾರಿ ಪಕ್ಕ ಗುಡಿಸಲು, ಶೆಡ್‍ಗಳನ್ನು ಹಾಕಿಕೊಂಡ ನಿವಾಸಿಗಳ ಪಟ್ಟಿಯನ್ನು ತಯಾರಿಸಿದ್ದು, ಅವರಿಗೆ ಸಮೀಪದ ದೇವಿಕ್ಯಾಂಪ್‍ನ ಸರ್ಕಾರಿ ಜಾಗೆಯಲ್ಲಿ ನಿವೇಶನಗಳನ್ನು ವಿತರಿಸಿ, ಶಾಶ್ವತ ನೆಲೆ ಒದಗಿಸುವ ಕೆಲಸ ಶೀಘ್ರದಲ್ಲೇ ನಡೆಯುವುದು’ ಎಂದರು.
ಇನ್ನು ಈಗಾಗಲೇ ಕ್ಷೇತ್ರದ ಬಹುತೇಕ ಕ್ಯಾಂಪ್, ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ ಜನರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ನೀರು ನೀಡುವುದು ಸೇರಿದಂತೆ ಆಸ್ತಿಗಳ ಹಕ್ಕು ಪತ್ರಗಳನ್ನು ನೀಡಲಾಗಿದೆ. ಕಿಂದಿಕ್ಯಾಂಪ್ ಹಾಗೂ ಚಳ್ಳೂರುಕ್ಯಾಂಪ್ ವಿಷಯದಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದ್ದು, ಶೀಘ್ರದಲ್ಲೇ ಪರಿಹರಿಸಿ ಕಂದಾಯ ಗ್ರಾಮದ ಮಾನ್ಯತೆ ನೀಡಲಾಗುವುದು ಎಂದರು.
ಪಟ್ಟಣದ 25, ದುಂಡಗಿ ಹಾಗೂ ಯರ್ರಮನ್‌ಕ್ಯಾಂಪ್‌ನ 144 ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ತಹಶೀಲ್ದಾರ್ ಎಂ.ಕುಮಾರಸ್ವಾಮಿ, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ದೊಡ್ಡಬಸವ ಬೂದಿ, ಮಂಜುನಾಥ ಮೇಗೂರು ಯುವ ಮುಖಂಡರಾದ ಅಯ್ಯಪ್ಪ ಉಪ್ಪಾರ, ಶರಣಪ್ಪ ಪರಕಿ, ನಾಗರಾಜ ಅರಳಿ, ನಾಗರಾಜ ಈಡಿಗೇರ, ಬಸವರಾಜ ಅರಳಿ, ಸಾಗರ ಕುಲಕರ್ಣಿ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮಗಾರಿಗೆ ಚಾಲನೆ:
ಪಟ್ಟಣದ ರಾಜೀವಗಾಂಧಿ ನಗರದಲ್ಲಿ ಕೆಕೆಆರ್‌ಡಿಬಿಯ ₹40 ಲಕ್ಷ ಅನುದಾನದಿಂದ ಕೈಗೊಳ್ಳಲಾಗಿರುವ ಫ್ಲೇವರ್ಸ್ ರಸ್ತೆ ಕಾಮಗಾರಿ ಹಾಗೂ ₹ 3 ಕೋಟಿ ವೆಚ್ಚದ ರಾರಾವಿ- ಬೇಲೂರು ರಸ್ತೆಯಿಂದ ಮೈಲಾಪುರ ಮಾರ್ಗವಾಗಿ ಉಮಲೂಟಿಗೆ ಸೇರುವ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಗುರುವಾರ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.