ಮುಳಬಾಗಿಲು (ಕೋಲಾರ): ತಾಲ್ಲೂಕಿನ ಯಳಚೇಪಲ್ಲಿ ಗ್ರಾಮದಿಂದ ಗುರುವಾರ (ಅ.2) ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಸಮೀಪದ ಕುಪ್ಪಂಪಾಳ್ಯ ಬಳಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ.
ಧನ್ಯಾ ಬಾಯಿ (13) ಹಾಗೂ ಚೈತ್ರಾ ಬಾಯಿ (13) ಮೃತ ಬಾಲಕಿಯರು. ಇವರಿಬ್ಬರ ಶವ ಮಾವಿನ ತೋಟದ ಬಾವಿಯಲ್ಲಿ ತೇಲುತಿತ್ತು.
ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅಥವಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಈಶ್ವರ್ ರಾವ್ ಪುತ್ರಿ ಚೈತ್ರಾ ಬಾಯಿ ಹಾಗೂ ರಾಘವೇಂದ್ರ ರಾವ್ ಸಾಕುತ್ತಿದ್ದ ಧನ್ಯಾ ಬಾಯಿ ಯಳಚೇಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದರು.
ಪ್ರತ್ಯೇಕ ಕುಟುಂಬಕ್ಕೆ ಸೇರಿದ ಈ ಬಾಲಕಿಯರು ಅ.2ರಂದು ಯಳಚೇಪಲ್ಲಿಯ ತಮ್ಮ ನಿವಾಸದ ಮುಂದೆ ಆಟವಾಡುತ್ತಿದ್ದರು. ಹೊರಗಡೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿದ್ದು, ಸಂಜೆಯಾದರೂ ಮನೆಗೆ ಬಂದಿಲ್ಲ.
ಆಗ ಪೋಷಕರು ಗ್ರಾಮದಲ್ಲಿ, ಸಂಬಂಧಿಕರ ಮನೆಗಳಲ್ಲಿ ಹಾಗೂ ತೋಟದಲ್ಲಿ ಹುಡುಕಿದ್ದಾರೆ. ಆಗಲೂ ಮಕ್ಕಳು ಪತ್ತೆಯಾಗಿಲ್ಲ. ಹೀಗಾಗಿ, ಅ.2 ರ ಸಂಜೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಸಂಬಂಧ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯರ ಪತ್ತೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾವಚಿತ್ರ ಸಮೇತ ಮಾಹಿತಿ ಹರಿಬಿಟ್ಟರು. ಈ ಮಾಹಿತಿಯನ್ನು ತಾಲ್ಲೂಕಿನ ಅನೇಕ ಮಂದಿ ವಾಟ್ಸ್‌ಆ್ಯಪ್ ಗ್ರೂಪ್, ಸ್ಟೇಟಸ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಶನಿವಾರ ಸಮೀಪದ ಕುಪ್ಪಂಪಾಳ್ಯ ಹೊರವಲಯದ ಮಣ್ಣಿನ ಬಾವಿಯಲ್ಲಿ ಶವಗಳು ತೇಲುತ್ತಿದ್ದ ವಿಚಾರ ಗೊತ್ತಾಗಿದೆ. ಸ್ಥಳಕ್ಕೆ ಬಂದ ಪೋಷಕರು ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾರೋ ತಮ್ಮ ಮಕ್ಕಳನ್ನು ಹೊಡೆದು ಬಾವಿಯಲ್ಲಿ ಬಿಸಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್‌ಐ ಅರುಣ್ ಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹಾಗೂ ಮುಳಬಾಗಿಲು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ
ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಈ ಇಬ್ಬರು ಬಾಲಕಿಯರು ಆಗಾಗ್ಗೆ ಈ ಬಾವಿ ಬಳಿ ತೆರಳುತ್ತಿದ್ದರು ಎಂಬುದು ಗ್ರಾಮಸ್ಥರ ಹೇಳಿಕೆಯಿಂದ ಗೊತ್ತಾಗಿದೆ. ಯಳಚೇಪಲ್ಲಿ ಗ್ರಾಮಕ್ಕೂ ಬಾವಿ ಇರುವ ಕುಪ್ಪಂಪಾಳ್ಯಕ್ಕೂ ಸುಮಾರು 2 ಕಿ.ಮೀ. ಅಂತರವಿದೆ. ಬಾಲಕಿ ಧರಿಸಿದ್ದ ವಾಚ್ ಸಂಜೆ 4.30ರ ವೇಳೆಗೆ ಸ್ಥಗಿತಗೊಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಬಾವಿಗೆ ಜಾರಿ ಬಿದ್ದು ಮೃತಪಟ್ಟಿರುವ ಸಾಧ್ಯತೆ
‘ಬಾಲಕಿಯರ ದೇಹದ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಬಾವಿಗೆ ಜಾರಿ ಬಿದ್ದು ಮೃತಪಟ್ಟಿರಬಹುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಯಾವುದೇ ಸಂಶಯ ವ್ಯಕ್ತವಾಗಿಲ್ಲ. ಆದರೂ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.