ADVERTISEMENT

ಶಾಸಕರು–ಸಂಸದರ ಗುದ್ದಾಟ ನಾಚಿಕೆಗೇಡು

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:24 IST
Last Updated 3 ಜೂನ್ 2021, 17:24 IST

ಕೋಲಾರ: ‘ಕೋವಿಡ್‌ ಸಂಕಷ್ಟದ ಕಾಲದಲ್ಲಿ ಜಿಲ್ಲೆಯ ಶಾಸಕರು ಮತ್ತು ಸಂಸದರ ನಡುವಿನ ಮುಸುಕಿನ ಗುದ್ದಾಟ ನಾಚಿಕೆಗೇಡು’ ಎಂದು ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್‌ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಜನರು ನರಳುತ್ತಿದ್ದಾರೆ. ಇಂತಹ ಸಂಕಷ್ಟದ ಕಾಲದಲ್ಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರು ಜವಾಬ್ದಾರಿ ಮರೆತು ಬೀದಿ ಜಗಳ ನಡೆಸುತ್ತಿರುವುದು ಸರಿಯಲ್ಲ’ ಎಂದು ಟೀಕಿಸಿದರು.

‘ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕದ ಕೊರತೆಯಿಂದ ಸೋಂಕಿತರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ನೂರಾರು ಸೋಂಕಿತರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಡುತ್ತಿದ್ದಾರೆ. ಆದರೆ, ಚುನಾಯಿತ ಜನಪ್ರತಿನಿಧಿಗಳು ಬಹಿರಂಗವಾಗಿ ಕಿತ್ತಾಡುತ್ತಿದ್ದಾರೆ. ಜನಪ್ರತಿನಿಧಿಗಳ ಈ ವರ್ತನೆ ಹೇಸಿಗೆ ಹುಟ್ಟಿಸುವಂತಿದೆ. ಕೋವಿಡ್‌ ವಿಚಾರದಲ್ಲಿ ರಾಜಕೀಯ ಬೇಡ. ರಾಜಕೀಯ ಚುನಾವಣೆಗಷ್ಟೇ ಸೀಮಿತವಾಗಬೇಕು’ ಎಂದರು.

ADVERTISEMENT

‘ನನ್ನ ರಾಜಕೀಯ ಜೀವನದಲ್ಲಿ ಪಕ್ಷ ದ್ರೋಹ ಮಾಡಿಲ್ಲ ಮತ್ತು ಹೈಕಮಾಂಡ್ ಸೂಚನೆ ಮೀರಿ ನಡೆದಿಲ್ಲ’ ಎಂದು ಹೇಳಿದರು. ಆದರೆ, ಜಿಲ್ಲೆಯ ಕೆಲ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ದ್ರೋಹ ಮಾಡಿ ನಂತರ ಕಣ್ಣೀರು ಹಾಕುತ್ತಾರೆ. ಹೈಕಮಾಂಡ್ ಅಣತಿ ಧಿಕ್ಕರಿಸುತ್ತಾರೆ’ ಎಂದು ‌ವಾಗ್ದಾಳಿ ನಡೆಸಿದರು.

‘ಜಿಲ್ಲೆಯಲ್ಲಿ ಪಕ್ಷ ಬಲಪಡಿಸಲು ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಸ್ಥಳೀಯ ಮುಖಂಡರ ವಿರೋಧ ಲೆಕ್ಕಿಸದೆ ವರಿಷ್ಠರು ಶ್ರೀನಿವಾಸಗೌಡ ಮತ್ತು ಗೋವಿಂದರಾಜು ಅವರನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಂಸದರ ವಿರುದ್ಧ ನಡೆಸಿದ ಸಭೆಗೆ ಶ್ರೀನಿವಾಸಗೌಡ ಮತ್ತು ಗೋವಿಂದರಾಜು ಅವರು ಹೋಗಿದ್ದು ಸರಿಯಲ್ಲ. ಚುನಾಯಿತ ಜನಪ್ರತಿನಿಧಿಗಳು ಸ್ವಪ್ರತಿಷ್ಠೆ ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.