ADVERTISEMENT

ಸಚಿವ ಸುಧಾಕರ್ ಬಾರದಿದ್ರೂ ಆಸ್ಪತ್ರೆ ಉದ್ಘಾಟನೆ ಮಾಡಿದ ಶಾಸಕ ರಮೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 12:59 IST
Last Updated 26 ಆಗಸ್ಟ್ 2021, 12:59 IST
ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುರುವಾರ ಉದ್ಘಾಟಿಸಿದರು
ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗುರುವಾರ ಉದ್ಘಾಟಿಸಿದರು   

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನೆ ವಿಚಾರವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಸ್ಥಳೀಯ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ನಡುವಿನ ರಾಜಕೀಯ ಸಂಘರ್ಷಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೈರಾಣಾದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಶ್ರೀನಿವಾಸಪುರ ಕ್ಷೇತ್ರದ ಮುದುವಾಡಿ, ಲಕ್ಷ್ಮೀಸಾಗರ ಹಾಗೂ ಬೈರಗಾನಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನಾ ಸಮಾರಂಭವನ್ನು ಗುರುವಾರಕ್ಕೆ (ಆ.26) ನಿಗದಿಪಡಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ, ಸಂಸದ ಎಸ್‌.ಮುನಿಸ್ವಾಮಿ, ಶಾಸಕ ರಮೇಶ್‌ಕುಮಾರ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಅಲ್ಲದೇ, ಸಮಾರಂಭದ ಆಹ್ವಾನ ಪತ್ರಿಕೆಗಳನ್ನು ಹಂಚಲಾಗಿತ್ತು.

ADVERTISEMENT

ಆದರೆ, ಸ್ವತಃ ತಾವೇ ಆಸ್ಪತ್ರೆಗಳನ್ನು ಉದ್ಘಾಟಿಸಬೇಕೆಂದು ಪಟ್ಟು ಹಿಡಿದ ಸಚಿವ ಸುಧಾಕರ್‌ ಸಮಾರಂಭ ಮುಂದೂಡುವಂತೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಈ ಸಂಗತಿ ತಿಳಿದ ಉಸ್ತುವಾರಿ ಸಚಿವ ಮುನಿರತ್ನ, ‘ಪೂರ್ವ ನಿಗದಿಯಂತೆ ಸಮಾರಂಭ ನಡೆಸಿ. ಸಚಿವ ಸುಧಾಕರ್ ಅವರ ಜತೆ ನಾನು ಮಾತನಾಡುತ್ತೇನೆ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೆ, ಸುಧಾಕರ್‌ ಅವರು ಪಟ್ಟು ಸಡಿಲಿಸದ ಕಾರಣ ಇಕ್ಕಟ್ಟಿಗೆ ಸಿಲುಕಿದ ಅಧಿಕಾರಿಗಳು ಅಂತಿಮ ಕ್ಷಣದಲ್ಲಿ ಬುಧವಾರ ರಾತ್ರಿ ಸಮಾರಂಭ ಮುಂದೂಡುವ ನಿರ್ಧಾರ ಕೈಗೊಂಡರು.

ಈ ಎಲ್ಲಾ ಗೊಂದಲಗಳ ನಡುವೆಯೂ ರಮೇಶ್‌ಕುಮಾರ್‌ ಅವರು ಮೂರೂ ಆಸ್ಪತ್ರೆಗಳನ್ನು ಗುರುವಾರ ಲೋಕಾರ್ಪಣೆ ಮಾಡಿದರು. ರಮೇಶ್‌ಕುಮಾರ್‌ ಮತ್ತು ಸುಧಾಕರ್‌ ನಡುವಿನ ರಾಜಕೀಯ ವೈಮನಸ್ಸಿನಿಂದ ಗೊಂದಲಕ್ಕೆ ಸಿಲುಕಿದ ಆರೋಗ್ಯ ಇಲಾಖೆ ಅಧಿಕಾರಿಗಳು ಸಮಾರಂಭದಿಂದ ದೂರ ಉಳಿದರು. ಮತ್ತೊಂದೆಡೆ ಸಚಿವ ಮುನಿರತ್ನ ಮತ್ತು ಸಂಸದ ಮುನಿಸ್ವಾಮಿ ಅವರು ಶ್ರೀನಿವಾಸಪುರ ಪಟ್ಟಣದಲ್ಲಿ ಆಯೋಜನೆಯಾಗಿದ್ದ ಪುರಸಭೆ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರೂ ನೂತನ ಆಸ್ಪತ್ರೆಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಗೈರಾದರು.

ಅಮಾನತು ಎಚ್ಚರಿಕೆ: ಆಸ್ಪತ್ರೆಗಳ ಉದ್ಘಾಟನಾ ಸಮಾರಂಭ ಮುಂದೂಡದಿದ್ದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ಅವರನ್ನು ಸೇವೆಯಿಂದ ಅಮಾನತು ಮಾಡುವುದಾಗಿ ಸಚಿವ ಸುಧಾಕರ್‌ ಎಚ್ಚರಿಕೆ ನೀಡಿದ್ದರು ಎಂದು ಆರೋಗ್ಯ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಜಗದೀಶ್‌, ‘ಸಚಿವ ಸುಧಾಕರ್‌ ಅವರ ಆದೇಶದಂತೆ ಕಾರ್ಯಕ್ರಮ ಮುಂದೂಡಿದ್ದೇವೆ. ಶಾಸಕ ರಮೇಶ್‌ಕುಮಾರ್‌ ಅವರು ಆಸ್ಪತ್ರೆಗಳಲ್ಲಿ ಪೂಜೆ ಮಾತ್ರ ಮಾಡಿದ್ದಾರೆ. ನನ್ನನ್ನು ಒಳಗೊಂಡಂತೆ ಇಲಾಖೆಯ ಯಾವುದೇ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಸಚಿವರ ಅನುಮತಿ ಪಡೆದು ಸದ್ಯದಲ್ಲೇ ಆಸ್ಪತ್ರೆ ಉದ್ಘಾಟನಾ ಸಮಾರಂಭದ ದಿನಾಂಕ ನಿಗದಿಪಡಿಸುತ್ತೇವೆ’ ಎಂದು ಹೇಳಿದರು.

‘ಶಿಷ್ಟಾಚಾರಕ್ಕೆ ಎಲ್ಲಾ ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗುತ್ತದೆ. ವಾಸ್ತವದಲ್ಲಿ ಸಚಿವ ಸುಧಾಕರ್‌ ಅವರು ಶ್ರೀನಿವಾಸಪುರಕ್ಕೆ ಬರುವ ಕಾರ್ಯಕ್ರಮವೇ ಇಲ್ಲ’ ಎಂದು ರಮೇಶ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.