ADVERTISEMENT

ಸದನದಲ್ಲಿ ಬೇಜವಾಬ್ದಾರಿ ಹೇಳಿಕೆ: ಶಾಸಕ ರಮೇಶ್‌ಕುಮಾರ್‌ರ ಅಣಕು ಶವಯಾತ್ರೆ

ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 13:09 IST
Last Updated 21 ಡಿಸೆಂಬರ್ 2021, 13:09 IST
ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದನ್ನು ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ಕೋಲಾರದಲ್ಲಿ ಮಂಗಳವಾರ ಅವರ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ಮಾಡಿದರು
ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದನ್ನು ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ಕೋಲಾರದಲ್ಲಿ ಮಂಗಳವಾರ ಅವರ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ಮಾಡಿದರು   

ಕೋಲಾರ: ಅತ್ಯಾಚಾರದ ವಿಚಾರವಾಗಿ ಸದನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ರ ವರ್ತನೆ ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ಇಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಪ್ರವಾಸಿ ಮಂದಿರದಿಂದ ಮೆಕ್ಕೆ ವೃತ್ತದವರೆಗೆ ರಮೇಶ್‌ಕುಮಾರ್‌ರ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಸದಾ ನೈತಿಕತೆ ಬಗ್ಗೆ ನೀತಿಪಾಠ ಹೇಳುವ ರಮೇಶ್‌ಕುಮಾರ್‌ ಅವರಿಗೆ ಸದನದಲ್ಲಿ ಮಾತನಾಡುವಾಗ ವಿವೇಚನೆ ಇರಲಿಲ್ಲಿವೆ? ಅವರ ನಡುವಳಿಕೆ ಏನೆಂದು ಶ್ರೀನಿವಾಸಪುರ ಕ್ಷೇತ್ರದ ಜನರಿಗೆ ಆರಂಭದಿಂದಲೂ ಗೊತ್ತು. ಅವರು ಸದನದಲ್ಲಿ ಮನಬಂದಂತೆ ಮಾತನಾಡಿ ತಮ್ಮ ವ್ಯಕ್ತಿತ್ವದ ವಿಕೃತಿ ಅನಾವರಣಗೊಳಿಸಿದ್ದಾರೆ’ ಎಂದು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಕಿಡಿಕಾರಿದರು.

ADVERTISEMENT

‘ಈ ಹಿಂದೆ ವಿಧಾನಸಭಾ ಸ್ಪೀಕರ್‌ ಸ್ಥಾನ ಅಲಂಕರಿಸಿದ್ದ ರಮೇಶ್‌ಕುಮಾರ್‌ ಅತ್ಯಾಚಾರದ ಸಂಬಂಧ ಬೇಜವಾಬ್ದಾರಿಯುತವಾಗಿ ಮಾತನಾಡಿ ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಸಂವಿಧಾನ, ಅಂಬೇಡ್ಕರ್ ಬಗ್ಗೆ ದೊಡ್ಡ ಭಾಷಣ ಮಾಡುವ ರಮೇಶ್‌ಕುಮಾರ್‌ ಅವರಿಗೆ ಹೆಣ್ಣು ಮಕ್ಕಳ ಮೇಲಿನ ಶೋಷಣೆ, ಕ್ರೌರ್ಯ, ಅತ್ಯಾಚಾರವನ್ನು ಪ್ರೋತ್ಸಾಹಿಸುವುದು ಸಂವಿಧಾನ ವಿರೋಧಿ ಎಂಬ ಕನಿಷ್ಠ ಜ್ಞಾನವಿಲ್ಲವೆ?’ ಎಂದು ಪ್ರಶ್ನಿಸಿದರು.

‘ಸ್ತ್ರೀಪರವಾದ ಧ್ವನಿ ಎತ್ತಲು ಚುನಾಯಿತ ಪ್ರತಿನಿಧಿಗಳು ಇರಬೇಕು. ಆದರೆ, ರಮೇಶ್‌ಕುಮಾರ್ ಅಸಹ್ಯ ಹುಟ್ಟಿಸುವಂತಹ ಹೇಳಿಕೆ ನೀಡಿ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ ಮತ್ತು ಜಿಲ್ಲೆಯ ಜನ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಶಾಸಕ ಸ್ಥಾನದ ಘನತೆ ಮರೆತು ಅತ್ಯಾಚಾರದ ಬಗ್ಗೆ ಲಘುವಾಗಿ ಮಾತನಾಡಿರುವುದು ಶೋಭೆಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಂಡನೀಯ: ‘ರಮೇಶ್‌ಕುಮಾರ್‌ರ ಮನೆಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಿದ್ದರೆ ಇದೇ ರೀತಿ ಹೇಳುತ್ತಿದ್ದಾರಾ? ಶಾಸಕ ಸ್ಥಾನದಲ್ಲಿದ್ದು, ಮಾಜಿ ಸ್ಪೀಕರ್ ಆಗಿ ಉತ್ತಮ ಕಾರ್ಯ ನಿರ್ವಹಿಸಿರುವ ಅವರ ಬಾಯಲ್ಲಿ ಇಂಥ ಹೇಳಿಕೆ ಬಂದರೆ ಸಮಾಜಕ್ಕೆ ಎಂತಹ ಸಂದೇಶ ರವಾನೆಯಾಗುತ್ತದೆ ಎಂಬ ಅರಿವು ಅವರಿಗಿಲ್ಲ. ಮಹಿಳೆಯರಿಗೆ ಆದ ಅನ್ಯಾಯದ ವಿರುದ್ಧ ಸದನದಲ್ಲಿ ಧ್ವನಿ ಎತ್ತಬೇಕಾದ ಶಾಸಕರು ಅತ್ಯಾಚಾರ ಸಂಬಂಧ ನೀಡಿರುವ ಹೇಳಿಕೆ ಖಂಡನೀಯ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿದೆ. ಹೆಣ್ಣನ್ನು ದೇವರೆಂದು ಪೂಜಿಸುವ ದೇಶ ಭಾರತ. ಆದರೆ, ಈ ನೆಲದಲ್ಲಿ ಹುಟ್ಟಿದ ರಮೇಶ್‌ಕುಮಾರ್‌ ಅತ್ಯಾಚಾರದ ಬಗ್ಗೆ ಲಘುವಾಗಿ ಮಾತನಾಡಿ ಮಹಿಳಾ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ. ಅತ್ಯಾಚಾರವನ್ನು ಪ್ರೇರೇಪಿಸುವ ರೀತಿಯಲ್ಲಿ ಮಾತನಾಡಿರುವ ಶಾಸಕ ರಮೇಶ್‌ಕುಮಾರ್‌ ಅವರಿಗೆ ನಾಚಿಕೆಯಾಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಹಿಳೆಯರನ್ನು ಭೋಗದ ವಸ್ತುವಾಗಿ ನೋಡುವ ಸಮಾಜದಲ್ಲಿ ಇಂತಹವರ ಹೇಳಿಕೆಗಳಿಂದ ಮಹಿಳೆಯರ ಮೇಲಿನ ಶೋಷಣೆ ಮತ್ತಷ್ಟು ಹೆಚ್ಚಲಿದೆ. ರಮೇಶ್‌ಕುಮಾರ್‌ ತಮ್ಮ ತಪ್ಪು ಅರಿತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಾರ್ವಜನಿಕ ಜೀವನದಿಂದ ದೂರ ಹೋಗಬೇಕು. ನಾಲಿಗೆ ಮೇಲೆ ಹಿಡಿತವಿಲ್ಲದ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಬೇಕು. ಅವರನ್ನು ಸದನದಿಂದ ಬಹಿಷ್ಕರಿಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನಂಜುಂಡಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಗೌಡ, ಪಕ್ಷದ ಮುಖಂಡರಾದ ಸಿಎಂಆರ್‌ ಶ್ರೀನಾಥ್‌, ಆನಂದ್, ರಾಜೇಂದ್ರ, ನಾಗೇಶ್, ರಾಮಾಂಜಿ, ರಾಮು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.