ಕೆಜಿಎಫ್ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಶಾಸಕಿ ಎಂ.ರೂಪಕಲಾ ಕಂದಾಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕೆಜಿಎಫ್: ಗಡಿ ಭಾಗದಲ್ಲಿ ಆಂಧ್ರಪ್ರದೇಶದವರಿಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿರುವ ಆರೋಪಗಳು ಕೇಳಿ ಬಂದಿವೆ. ಇಂತಹ ಪ್ರಕರಣಗಳು ಕಂಡುಬಂದರೆ ಸಂಬಂಧಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಂ. ರೂಪಕಲಾ ಶಶಿಧರ್ ಎಚ್ಚರಿಕೆ ನೀಡಿದರು.
ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಕಂದಾಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಮತ್ತು ಇತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪೋಡಿ ದುರಸ್ತಿಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮ ಲೆಕ್ಕಿಗರಿಂದ ಹಿಡಿದು ತಹಶೀಲ್ದಾರ್‌ವರೆಗೆ ಲಂಚದ ಹಣ ನಿಗದಿಪಡಿಸಲಾಗಿದೆ ಎಂದು ತಾಲ್ಲೂಕು ಕಚೇರಿ ಕಾರಿಡಾರ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಹಶೀಲ್ದಾರ್ ಭರತ್ ಅವರಿಗೆ ಶಾಸಕಿ ಸೂಚಿಸಿದರು.
ಆಂಧ್ರಪ್ರದೇಶದವರು ನಮ್ಮ ಗಡಿಯಲ್ಲಿ ಜಮೀನು ಖರೀದಿಸಲು ಹೇಗೆ ಸಾಧ್ಯ. ನಮ್ಮ ಅಧಿಕಾರಿಗಳೇ ಅವರಿಗೆ ಸಹಕರಿಸುತ್ತಿದ್ದಾರೆ ಎಂಬಂತಿದೆ. ನಮ್ಮ ಗಡಿಭಾಗದಲ್ಲಿ ಬೃಹತ್ ಎಪಿಎಂಸಿ ಬರಲಿದೆ. ಆಂಧ್ರಪ್ರದೇಶ ಸರ್ಕಾರವು ಗಡಿಭಾಗದಲ್ಲಿ ಹೊರ ವರ್ತುಲ ರಸ್ತೆ ನಿರ್ಮಿಸಲಿದೆ. ಇದಕ್ಕಾಗಿಯೇ ಗಡಿಭಾಗದ ಜಮೀನಿಗೆ ಚಿನ್ನದ ಬೆಲೆ ಬಂದಿದೆ. ಇದು ದುರುಪಯೋಗವಾಗಬಾರದು ಎಂದು ಹೇಳಿದರು.
ಕಂದಾಯ ಅಧಿಕಾರಿಗಳ ವೇತನ ಪರಿಷ್ಕರಣೆಯಾಗಿದ್ದು, ಜನರ ಬಳಿ ಯಾವುದೇ ಕಾರಣಕ್ಕೂ ಲಂಚಕ್ಕೆ ಕೈಯೊಡ್ಡಬಾರದು. ಜನರನ್ನು ಸುಖಾಸುಮ್ಮನೇ ಕಚೇರಿಗೆ ಅಲೆಯುವಂತೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.