ADVERTISEMENT

ಮೋದಿ ಅಲೆ ಫೇಸ್‌ಬುಕ್‌ಗೆ ಸೀಮಿತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 7:19 IST
Last Updated 13 ಏಪ್ರಿಲ್ 2019, 7:19 IST

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿಯವರ ಅಲೆ ವಾಟ್ಸ್‌ ಆ್ಯಪ್‌, ಟಿ.ವಿ ಜಾಹೀರಾತು, ಫೇಸ್‌ಬುಕ್‌ಗೆ ಮಾತ್ರ ಸೀಮಿತವಾಗಿದೆ. ದೇಶದ ನೆಲದ ಮೇಲೆ ಮೋದಿ ಅಲೆಯಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಮಾಜಿ ಅಧ್ಯಕ್ಷ ಆರ್.ಅಶ್ವತ್ಥನಾರಾಯಣ ಟೀಕಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೋದಿಯವರು 5 ವರ್ಷದಲ್ಲಿ ಸದನದಲ್ಲಿ 24 ಗಂಟೆ 25 ನಿಮಿಷ ಮಾತ್ರ ಮಾತನಾಡಿದ್ದಾರೆ. ಅವರ ಆಡಳಿತದಲ್ಲಿ ದೇಶದ ಅರ್ಥ ವ್ಯವಸ್ಥೆ ದಿವಾಳಯಾಗಿದೆ. ನಿರುದ್ಯೋಗ ಪ್ರಮಾಣ ಶೇ 40ರಷ್ಟು ಹೆಚ್ಚಿದೆ. ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ ಸಂಬಂಧ ಸುಪ್ರೀಂ ಕೋರ್ಟ್‌ ಮೋದಿಯವರಿಗೆ ಛೀಮಾರಿ ಹಾಕಿದೆ’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿ ಆಡಳಿತಾವಧಿಯಲ್ಲಿ ಅಡುಗೆ ಅನಿಲ, ಡಿಸೇಲ್‌, ದಿನಬಳಕೆ ವಸ್ತುಗಳು ಬೆಲೆ ಗಗನಕ್ಕೇರಿದೆ. ಹಸಿದ ಹೊಟ್ಟೆಗೆ ಅನ್ನ ಸಿಗದಂತಾಗಿದೆ. ಮೋದಿ ರೈತರ ಸಾಲ ಮನ್ನ ಮಾಡಲಿಲ್ಲ. ಬದಲಿಗೆ ಬಂಡವಾಳಶಾಹಿಗಳಿಗೆ ಕೋಟಿ ಕೋಟಿ ಹಣ ಕೊಟ್ಟು ದೇಶ ಬಿಟ್ಟು ಓಡಿ ಹೋಗಲು ನೆರವಾದರು. ಇದೇ ಮೋದಿಯವರ ಐದು ವರ್ಷದ ಸಾಧನೆ’ ಎಂದು ಕುಟುಕಿದರು.

ADVERTISEMENT

‘ರಾಜೀವ್ ಗಾಂಧಿ ಆಡಳಿತದಲ್ಲಿ ವಿಕೇಂದ್ರೀಕರಣ ತಂದರು. ಮಾಹಿತಿ ತಂತ್ರಜ್ಞಾನಕ್ಕೆ ನಾಂದಿ ಹಾಡಿದರು. ವಿಜ್ಞಾನ, ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರಕ್ಕೂ ಒತ್ತು ನೀಡಿದರು. ಕಾಂಗ್ರೆಸ್‌ನ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ರೈತರ ₹ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿ ದಾಖಲೆ ಸೃಷ್ಟಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಜನಪರ ಯೋಜನೆ ಜಾರಿಗೊಳಿಸಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ 156 ಭರವಸೆಗಳನ್ನು ನಿಗದಿತ ಅವಧಿಯೊಳಗೆ ಈಡೇರಿಸಿ ನುಡಿದಂತೆ ನಡೆದರು’ ಎಂದರು.

ಗ್ರಾಮಾಂತರ ಬ್ಲಾಕ್ ಉಪಾಧ್ಯಕ್ಷ ವಿ.ರಾಮಚಂದ್ರ, ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ಸಂಚಾಲಕ ವಿಜಯಕುಮಾರ್, ಜಿಲ್ಲಾ ಎಸ್‌ಸಿ ವಿಭಾಗದ ಸಂಚಾಲಕ ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.