ADVERTISEMENT

ಹಣ ದುರ್ಬಳಕೆ: ತನಿಖೆಗೆ ಆಗ್ರಹ

ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಬಿಡುಗಡೆಯಾದ ಅನುದಾನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 14:33 IST
Last Updated 13 ಅಕ್ಟೋಬರ್ 2021, 14:33 IST

ಕೋಲಾರ: ‘ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ಹಾಗೂ ಕೆಜಿಎಫ್‌ ತಾಲ್ಲೂಕು ವ್ಯಾಪ್ತಿಯ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಬಿಡುಗಡೆಯಾಗಿದ್ದ ಹಣವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿಒ) ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಸರಸ್ವತಮ್ಮ ಆಗ್ರಹಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಿಡಿಪಿಒಗಳು ಅಂಗನವಾಡಿ ಕಾರ್ಯಕರ್ತೆಯರನ್ನು ಬೆದರಿಸಿ ಅನುದಾನ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಸಿಡಿಪಿಒಗಳಾದ ನಾಗರತ್ನ, ಮಹೇಶ್ ಮತ್ತು ಎಂ.ರಮ್ಯಾ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಸಣ್ಣಪುಟ್ಟ ದುರಸ್ತಿಗಾಗಿ ಮಾರ್ಚ್‌ನಲ್ಲಿ ಪ್ರತಿ ಅಂಗನವಾಡಿ ಕೇಂದ್ರಕ್ಕೆ ₹ 2,400ರಂತೆ ಸಿಡಿಪಿಒ ಮತ್ತು ಕಾರ್ಯಕರ್ತೆಯರ ಜಂಟಿ ಖಾತೆಗೆ ಹಣ ಜಮೆಯಾಗಿತ್ತು. ಒಟ್ಟಾರೆ 3 ತಾಲ್ಲೂಕಿಗೆ ಸುಮಾರು ₹ 10 ಲಕ್ಷ ಬಿಡುಗಡೆಯಾಗಿದ್ದು, ಈ ಹಣವನ್ನು ಸಿಡಿಪಿಒಗಳು ಬಲವಂತವಾಗಿ ಕಾರ್ಯಕರ್ತೆಯರಿಂದ ಪಡೆದಿದ್ದಾರೆ. ₹ 1 ಸಾವಿರ ಬೆಲೆ ಬಾಳುವ ಜಮಖಾನ, ಕುರ್ಚಿ, ಫ್ಯಾನ್ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಜಿಲ್ಲೆಯಲ್ಲಿ 2015ರಿಂದ ನಿವೃತ್ತಿಯಾದ ಮತ್ತು ಮರಣ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಈವರೆಗೆ ಇಡುಗಂಟು, ಎನ್‌ಪಿಎಸ್‌ ಹಣ ಕೊಟ್ಟಿಲ್ಲ. ಕೋವಿಡ್‌ನಿಂದ ಮೃತಪಟ್ಟ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಶೀಘ್ರವೇ ಇಡುಗಂಟು, ಎನ್‌ಪಿಎಸ್ ಹಣ ಮತ್ತು ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು’ ಎಂದು ಕೋರಿದರು.

ವರ್ಗಾವಣೆ ಮಾಡಿ: ‘ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿಯರು ಅಕಾಲಿಕವಾಗಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕೆಂದು ಸರ್ಕಾರದ ಆದೇಶವಿದೆ. ಆದರೆ, ಬಂಗಾರಪೇಟೆ ಭೋವಿನಗರ ಅಂಗನವಾಡಿ ಕಾರ್ಯಕರ್ತೆ ಪದ್ಮಾ ಅವರು ಕೋವಿಡ್‌ನಿಂದ ಮೃತಪಟ್ಟ ಒಂದೂವರೆ ವರ್ಷ ಕಳೆದರೂ ಅಧಿಕಾರಿಗಳು ಅವರ ಮಗಳಿಗೆ ಕೆಲಸ ನೀಡದೆ ತೊಂದರೆ ಮಾಡುತ್ತಿದ್ದಾರೆ. ಆ ಬೇಜವಾಬ್ದಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಸತತ 20 ವರ್ಷದಿಂದ ಬಂಗಾರಪೇಟೆಯಲ್ಲಿ ಯೋಜನಾ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜ್ಯೋತಿ ಲಕ್ಷ್ಮೀ ಅವರು ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅವರ ಕಿರುಕುಳದಿಂದಾಗಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.

ಮಹಾಮಂಡಳಿ ಜಿಲ್ಲಾ ಘಟಕದ ಕಾರ್ಯದರ್ಶಿ ಸಿ.ಚಿನ್ನಮ್ಮ, ಪ್ರಧಾನ ಕಾರ್ಯದರ್ಶಿ ಜಿ.ಟಿ.ಪ್ರಭಾವತಿ, ಕೆಜಿಎಫ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷೆ ಕಲಾವತಿ, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷೆ ಲೀಲಾವತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.