ADVERTISEMENT

ಸಚಿವ ನಾಗೇಶ್‌ ವಿರುದ್ಧ ಸಂಸದ ಟೀಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 11:02 IST
Last Updated 30 ಅಕ್ಟೋಬರ್ 2020, 11:02 IST
ಮುಳಬಾಗಿಲು ನೇತಾಜಿ ಕ್ರೀಡಾಂಗಣದ ಮತಗಟ್ಟೆಗೆ ಬುಧವಾರ ಸಂಜೆ ಸಂಸದ ಎಸ್. ಮುನಿಸ್ವಾಮಿ ಭೇಟಿ ನೀಡಿದರು
ಮುಳಬಾಗಿಲು ನೇತಾಜಿ ಕ್ರೀಡಾಂಗಣದ ಮತಗಟ್ಟೆಗೆ ಬುಧವಾರ ಸಂಜೆ ಸಂಸದ ಎಸ್. ಮುನಿಸ್ವಾಮಿ ಭೇಟಿ ನೀಡಿದರು   

ಮುಳಬಾಗಿಲು: ‘ಕೋಲಾರ ಜಿಲ್ಲೆಯವರು ಸೂಕ್ಮಮತಿಗಳು. ಯಾರಿಗೆ ಯಾವಾಗ ಪಾಠ ಕಲಿಸುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಬಿಜೆಪಿಯನ್ನು ಬಲಪಡಿಸುವುದೇ ನನ್ನ ಗುರಿ’ ಎಂದು ಸಂಸದ
ಎಸ್. ಮುನಿಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿ‌ಗಾರರೊಂದಿಗೆ ಮಾತನಾಡಿದ ಅವರು, ‘ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಲವು ಮುಖಂಡರು ಶೀಘ್ರವೇ ಬಿಜೆಪಿಗೆ ಸೇರ್ಪಡೆಯಾಗಲಿದ್ದು, ಮುಳಬಾಗಿಲುನಿಂದಲೇ ಬಿಜೆಪಿ ಪರ್ವ ಆರಂಭಿಸಲಾಗುವುದು’ ಎಂ‌ದರು.

‘ಕೆಲವರು ಅಧಿಕಾರ ಸಿಕ್ಕಿದ ತಕ್ಷಣ ಗೆಲ್ಲಿಸಿದವರನ್ನೇ ಗೇಲಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಅಂತಹ ಜಾಯಮಾನ ನನ್ನದಲ್ಲ. ಹತ್ತಿದ ಏಣಿ ಒದ್ದರೆ ಮತ್ತೆ ಇಳಿಯಲು ಕಷ್ಟವಾಗುತ್ತದೆ ಎಂಬ ಬಗ್ಗೆ ನನಗೆ ಅರಿವಿದೆ. ನಾನು ಕೋಲಾರ ಜಿಲ್ಲೆಯವನಾಗಿದ್ದು, ಜನರ ನಾಡಿಮಿಡಿತ ಅರಿತಿದ್ದೇನೆ. ಯಾವುದೇ ವ್ಯಕ್ತಿ, ಶಕ್ತಿಯ ಹಿಂದೆ ಹೋಗುವುದಿಲ್ಲ’ ಎಂದು ಹೆಸರು ಪ್ರಸ್ತಾಪಿಸದೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್‌ ಅವರನ್ನು ಟೀಕಿಸಿದರು.‌

ADVERTISEMENT

‘ಮುಳಬಾಗಿಲುನಲ್ಲಿ ಮುಖ ಪರಿಚಯವೇ ಇಲ್ಲದ ವ್ಯಕ್ತಿಯನ್ನು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಶಾಸಕರನ್ನಾಗಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಸಿಕ್ಕಿರುವ ಅಧಿಕಾರದ ಅಮಲಿನಲ್ಲಿ ಸಹಾಯ ಮಾಡಿದವರ ತಲೆ ಮೇಲೆ ಭಸ್ಮಾಸುರನ ರೀತಿಯಲ್ಲಿ ಕೈಇಡಲು ಹೊರಟಿದ್ದಾರೆ’ ಎಂ‌ದರು.

ನಗರ ಬಿಜೆಪಿ ಘಟಕದ ಅಧ್ಯಕ್ಷ ಕಲ್ಲುಪಲ್ಲಿ ಮೋಹನ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಶೋಕ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ಕೃಷ್ಣಮೂರ್ತಿ, ಬೆಳಗಾನಹಳ್ಳಿ ರಮೇಶ್, ಜಿಲ್ಲಾ ಖಜಾಂಚಿ ಕೆ.ಜಿ. ವೆಂಕಟರವಣ, ಕೆ.ಎಚ್. ನಾಗರಾಜ್, ಗುನಗಂಟೆಪಾಳ್ಯ ಎಂ. ಪ್ರಭಾಕರ್, ಮುರಳಿಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.